ಬೆಂಗಳೂರು: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 75 ನೇ ಸಂಸ್ಥಾಪನಾ ದಿನಾಚರಣೆಗೆ ಬೆಂಗಳೂರಿನಲ್ಲಿಂದು ರಾಜ್ಯಪಾಲರು ಚಾಲನೆ ನೀಡಿದರು.
ಸಂಘದ 75 ನೇ ವರ್ಷದ ಅಮೃತ ಸಂಭ್ರಮದ ಲಾಂಚನವನ್ನು ಬಿಡುಗಡೆ ಮಾಡಿದ ರಾಜ್ಯಪಾಲರಾದ ಥಾವರ್ ಚಂದ್ ಗೆಲ್ಹೋಟ್ ಅವರು, ಕರ್ನಾಟಕ ಪತ್ರಕರ್ತರ ಸಹಕಾರ ಸಂಘವು ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಇನ್ನಷ್ಟು ಶ್ರಮಿಸಲಿ ಎಂದು ಹಾರೈಸಿದರು.
ಪತ್ರಕರ್ತರು ಸಂವಿಧಾನದ 4ನೇ ಅಂಗ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಪತ್ರಕರ್ತರ ಪಾತ್ರ ಶ್ಲಾಘನೀಯ. ಪತ್ರಕರ್ತರ ಆರ್ಥಿಕ ಅಭಿವೃದ್ಧಿಗೆ ದೇಶದಲ್ಲೇ ಈ ರೀತಿಯ ಸಂಸ್ಥೆ ಇರುವುದನ್ನು ಶ್ಲಾಘಿಸಿದ ರಾಜ್ಯಪಾಲರಾದ ಗೆಲ್ಹೋಟ್ ಅವರು ಪತ್ರಕರ್ತ ನೋವು ನಲಿವುಗಳಿಗೆ ಸ್ಪಂದಿಸುವ ಸಂಸ್ಥೆಗಳು ಹೆಚ್ಚಾಗಬೇಕು ಎಂದು ಹೇಳಿದರು.
ಈ ವೇಳೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾದ ರಮೇಶ್ ಪಾಳ್ಯ ಅವರು ಸಂಘದ ಚಟುವಟಿಕೆಗಳ ಬಗ್ಗೆ ರಾಜ್ಯಪಾಲರಿಗೆ ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಖ್ಯಾತ ವ್ಯಂಗ್ಯಚಿತ್ರ ಕಲಾವಿದರಾದ ಗುಜ್ಜಾರಪ್ಪ ಅವರು ರಚಿಸಿದ ಕಲಾಕೃತಿಯನ್ನು ಹಾಗೂ ಹಿರಿಯ ಛಾಯಾಗ್ರಾಹಕರಾದ ವಿಶ್ವನಾಥ್ ಸುವರ್ಣ ಅವರ ‘ಕನ್ನಡ ನಾಡಿನ ಬಣ್ಣದ ಬಾನಾಡಿಗಳು’ ಚಿತ್ರಕೃತಿಯನ್ನು ಸ್ಮರಣಿಕೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ದೊಡ್ಡ ಬೊಮ್ಮಯ್ಯ, ಖಜಾಂಚಿ ಮೋಹನ್ ಕುಮಾರ್, ನಿರ್ದೇಶಕರಾದ ಎಂ.ಎಸ್. ರಾಜೇಂದ್ರಕುಮಾರ್, ವಿನೋದ್ ಕುಮಾರ್ ಬಿ. ನಾಯ್ಕ್, ರಮೇಶ್ ಹಿರೇಜಂಬೂರು, ಧ್ಯಾನ್ ಪೂಣಚ್ಚ, ನಯನಾ ಎಸ್., ವನಿತಾ ಎನ್., ಕೃಷ್ಣಕುಮಾರ್ ಪಿ.ಎಸ್. ಹಾಗೂ ಕಾರ್ಯದರ್ಶಿ ಕೆಂಪರಾಜು, ಸಿಬ್ಬಂದಿಗಳಾದ ಹೇಮಂತ್ ಕುಮಾರ್, ಅನಿತಾ ಜೋಯಿಸ್, ಆನಂದ್ ಉಪಸ್ಥಿತರಿದ್ದರು.