ಮನೆ ಕಾನೂನು ಸರ್ಕಾರಕ್ಕೆ ಮೃದು ಭಾಷೆ ಅರ್ಥವಾಗಲ್ಲ, ಕಠಿಣ ಆದೇಶ ಬರೆಯಬೇಕು: ಹೈಕೋರ್ಟ್‌ ಕೆಂಡಾಮಂಡಲ

ಸರ್ಕಾರಕ್ಕೆ ಮೃದು ಭಾಷೆ ಅರ್ಥವಾಗಲ್ಲ, ಕಠಿಣ ಆದೇಶ ಬರೆಯಬೇಕು: ಹೈಕೋರ್ಟ್‌ ಕೆಂಡಾಮಂಡಲ

0

ನಿವೃತ್ತ ಗ್ರಂಥಾಲಯ ಸಹಾಯಕಿಯೊಬ್ಬರ ವೇತನ ಮತ್ತು ಹಿಂಬಾಕಿ ಪಾವತಿ ವಿಚಾರದಲ್ಲಿ ನ್ಯಾಯಾಲಯದ ಆದೇಶ ಪಾಲಿಸದ ರಾಜ್ಯ ಸರ್ಕಾರವನ್ನು ಮಂಗಳವಾರ ತೀವ್ರ ತರಾಟೆಗೆ ಗುರಿಪಡಿಸಿರುವ ಕರ್ನಾಟಕ ಹೈಕೋರ್ಟ್‌ “ಸರ್ಕಾರಕ್ಕೆ ಮೃದು ಭಾಷೆಯ ಆದೇಶ ಅರ್ಥವಾಗುವುದಿಲ್ಲ. ನಾವು ಪ್ರತಿಯೊಂದು ಆದೇಶವನ್ನು ಆಸಿಡ್‌ ನಲ್ಲಿ ಅದ್ದಿದ ಲೇಖನಿಯಲ್ಲಿ (ಕಠಿಣವಾಗಿ) ಬರೆಯಬೇಕಿದೆ” ಎಂದು ಮೌಖಿಕವಾಗಿ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರಿನ ವಿ ಎ ನಾಗಮಣಿ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಮೇಲಿನಂತೆ ಹೇಳಿದೆ.

“ರಾಜ್ಯ ಸರ್ಕಾರವು ಆಕ್ಷೇಪಣೆ ಸಲ್ಲಿಸುವಾಗ ಅನುಪಾಲನಾ ವರದಿ ಸಲ್ಲಿಸುತ್ತದೆ ಎಂಬ ನಿರೀಕ್ಷೆ ಇತ್ತು. ದುರದೃಷ್ಟವಶಾತ್‌ ನ್ಯಾಯಾಲಯದ ಆದೇಶವು ಭರವಸೆ ವಿರುದ್ಧದ ಭರವಸೆಯ ವಿರುದ್ಧ ಭರವಸೆ ಇರಿಸಿಕೊಳ್ಳುವ ಅಷ್ಟೇ ಆಗಿದೆ. ಈಗ ಸರ್ಕಾರವು ಮೆಮೊ ಸಲ್ಲಿಸುವ ಮೂಲಕ ಆರು ವಾರ ಸಮಯ ಕೇಳಿದೆ. ರಾಜ್ಯ ಸರ್ಕಾರವು 5 ಲಕ್ಷ ರೂಪಾಯಿಯನ್ನು ಎರಡು ವಾರಗಳಲ್ಲಿ ಠೇವಣಿ ಇಡುವುದಕ್ಕೆ ಒಳಪಟ್ಟು ಮೂರು ವಾರಗಳ ಕಾಲಾವಕಾಶ ನೀಡುತ್ತಿದೆ. ದಂಡದ ಹಣವನ್ನು ಸರ್ಕಾರದಲ್ಲಿ ಪ್ರಮುಖ ಸ್ಥಾನದಲ್ಲಿರುವ ಆರು ಪ್ರತಿವಾದಿಗಳಲ್ಲಿ ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿಸಿ ವಸೂಲು ಮಾಡಬಹುದಾಗಿದೆ. ಆದೇಶ ಈ ಪ್ರತಿಯನ್ನು ಮುಖ್ಯ ಕಾರ್ಯದರ್ಶಿಗೆ ಕಳುಹಿಸಿಕೊಡಬೇಕು” ಎಂದು ನ್ಯಾಯಾಲಯ ಆದೇಶ ಮಾಡಿದೆ.

ಇದಕ್ಕೂ ಮುನ್ನ, ನ್ಯಾ. ದೀಕ್ಷಿತ್‌ ಅವರು “2020ರ ಅಕ್ಟೋಬರ್‌ನಲ್ಲಿ ದೂರುದಾರರಿಗೆ ದಕ್ಕಬೇಕಾದ ಸೌಲಭ್ಯವನ್ನು ಎರಡು ತಿಂಗಳಲ್ಲಿ ತಲುಪಿಸುವಂತೆ ಆದೇಶ ಮಾಡಿದರೂ ಅದನ್ನು ಪಾಲಿಸಿಲ್ಲವೇಕೆ” ಎಂದು ಸರ್ಕಾರದ ವಕೀಲರಿಗೆ ಮೌಖಿಕವಾಗಿ ಪ್ರಶ್ನಿಸಿದರು.

“ನ್ಯಾಯಾಲಯದಲ್ಲಿ ಯಶಸ್ವಿಯಾದ ದಾವೆದಾರರಿಗೆ ನೀವು (ಸರ್ಕಾರ) ಕಿರುಕುಳ ನೀಡುತ್ತಿದ್ದೀರಿ. 2020ರ ಅಕ್ಟೋಬರ್‌ನಲ್ಲಿ ಆದೇಶ ಮಾಡಲಾಗಿದೆ. ಮೊದಲಿಗೆ ಜನರು ಆದೇಶ ಮಾಡಿಸಿಕೊಳ್ಳಬೇಕು. ಅದನ್ನು ಜಾರಿ ಮಾಡಿಸಲು ಓಡಾಡಬೇಕು. ಇದು ಎಲ್ಲಿಯ ತನಕ ನಡೆಯಬೇಕು? ಈ ತಮಾಷೆ ಎಲ್ಲಾದರೂ ಒಂದು ಕಡೆ ನಿಲ್ಲಬೇಕಿದೆ. ಮೂರೂವರೆ ವರ್ಷ ಯಾವುದೇ ಮನುಷ್ಯನ ಬದುಕಿನಲ್ಲಿ ಮಹತ್ವವಾದದ್ದು. ವಿಶೇಷವಾಗಿ ದಾವೆದಾರರ ಬದುಕಿನಲ್ಲಿ ಪ್ರಮುಖವಾದುದು. ಇದು ರಾಜ್ಯದ ಉನ್ನತ ನ್ಯಾಯಾಲಯ. ಅದನ್ನು ಸರ್ಕಾರ ಪಾಲಿಸದಿದ್ದರೆ… ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಬರೆದಿರುವುದನ್ನು ಈಚೆಗೆ ಸಿಜೆ ಅವರು ಉಲ್ಲೇಖಿಸಿದ್ದರು ‘ಒಕ್ಕೂಟ ಸರ್ಕಾರದ ವಿರುದ್ಧ ದಾವೆದಾರರು ಜಯಿಸಿದರೆ ಸರ್ಕಾರ ಸಂಭ್ರಮಿಸುತ್ತದೆ. ಏಕೆಂದರೆ ದಾವೆದಾರರಿಗೆ ನ್ಯಾಯದಾನವಾಗಿದೆ ಎಂದು.’ ಆ ಸಂಭ್ರಮ ಇಲ್ಲಿ ಎಲ್ಲಿದೆ? ನ್ಯಾಯಾಲಯದ ಕಾರಿಡಾರ್‌ನಲ್ಲಿ ಸಮಯ ಕಳೆಯಬೇಕೆ? ಇಲ್ಲಿಗೆ ಯಾರೊಬ್ಬರು ಆಯ್ಕೆ ಮಾಡಿಕೊಂಡು ಬರುವುದಿಲ್ಲ. ಹೃದಯದಲ್ಲಿ ಸಂತೋಷ ಇಲ್ಲದಿದ್ದಾಗ ಜನರು ನ್ಯಾಯಾಲಯಕ್ಕೆ ಬರುತ್ತಾರೆ. ನಾವು ಸತ್ಯ ಹೇಳುತ್ತಿದ್ದೇವೆ. ಈಗ ನಮ್ಮನ್ನೂ ನೀವು ಹಾಗೆ ಮಾಡುತ್ತಿದ್ದೀರಿ” ಎಂದು ಚಾಟಿ ಬೀಸಿದರು.

 “ನಮ್ಮ ಭಾಷೆ ಸರ್ಕಾರಕ್ಕೆ ಅರ್ಥವಾಗುವುದಿಲ್ಲ ಎಂಬುದು ನಮಗೆ ತಿಳಿದಿದೆ. ಅದಕ್ಕೆ ಬೇರೆಯದೇ ಭಾಷೆ ಬಳಸಬೇಕಿದೆ. ಪರಿಭಾಷೆಯು ರೂಪಾಂತರವಾಗಬೇಕಿದೆ. ಸರ್ಕಾರಕ್ಕೆ ಮೃದು ಭಾಷೆಯ ಆದೇಶ ಅರ್ಥವಾಗುವುದಿಲ್ಲ. ನಾವು ಪ್ರತಿಯೊಂದು ಆದೇಶವನ್ನು ಆಸಿಡ್‌ನಲ್ಲಿ ಅದ್ದಿದ ಲೇಖನಿಯಿಂದ (ಕಠಿಣವಾಗಿ) ತೀರ್ಪು ಬರೆಯಬೇಕಿದೆ. ಆ ಹಂತಕ್ಕೆ ನಾವು ಈಗ ಬಂದಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

ನ್ಯಾಯಾಲಯದ ಆದೇಶ: ಸರ್ಕಾರದ ವಕೀಲರು ಮೆಮೊ ಸಲ್ಲಿಸಿ, ಹಣಕಾಸು ಇಲಾಖೆಯ ಅನುಮತಿಗಾಗಿ ಪ್ರಸ್ತಾವನೆ ಕಳುಹಿಸಲಾಗಿದೆ. ಇದಕ್ಕಾಗಿ ನ್ಯಾಯಾಲಯದ ಆದೇಶ ಪಾಲಿಸಲು ಆರು ವಾರ ಸಮಯ ನೀಡಬೇಕು ಎಂದು ಕೋರಿದ್ದಾರೆ. ಸಾಮಾನ್ಯವಾಗಿ ಸರ್ಕಾರ ಕೋರಿದರೆ ನ್ಯಾಯಾಲಯವು ಆರು ವಾರ ಸಮಯ ನೀಡುತ್ತದೆ. ಆದರೆ, ಪ್ರಕರಣದ ವಿಚಾರವನ್ನು ನೋಡಿದರೆ ರಾಜ್ಯ ಸರ್ಕಾರಕ್ಕೆ ಆರು ವಾರ ಸಮಯ ನೀಡಲಾಗದು ಎಂದು ಆದೇಶದಲ್ಲಿ ದಾಖಲಿಸಿದೆ.

2014ರಲ್ಲಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅವರು ಗ್ರಂಥಾಲಯ ಸಹಾಯಕಿಯಾಗಿ ಸರ್ಕಾರದ ಗ್ರಂಥಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಇದಕ್ಕೆ ಅಗತ್ಯವಾದ ಅರ್ಹತೆಯನ್ನೂ ಹೊಂದಿದ್ದರು. ಇದೇ ಥರದ ಪರಿಸ್ಥಿತಿಯಲ್ಲಿ ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಗ್ರಂಥಪಾಲಕರು, ಸಹಾಯಕ ಗ್ರಂಥಪಾಲಕರು ವೇತನದಲ್ಲಿ ಸಮಾನತೆ ಕೋರಿ ನ್ಯಾಯಾಲಯದ ಕದತಟ್ಟಿದ್ದರು. ಇದರ ಆಧಾರದಲ್ಲಿ ವೇತನ ಸಮಾನತೆಗೆ ಅರ್ಜಿದಾರರು ಅರ್ಹರಾಗಿದ್ದಾರೆ ಎಂದು ನ್ಯಾಯಾಲಯವು ಅದನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಈ ಹಿಂದಿನ ಆದೇಶಕ್ಕೆ ಅನುಗುಣವಾಗಿ ಸರ್ಕಾರಿ ಗ್ರಂಥಪಾಲಕರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಅರ್ಜಿದಾರರಿಗೆ ನೀಡಬೇಕು ಎಂದು 2021ರ ಅಕ್ಟೋಬರ್‌ನಲ್ಲಿ ಏಕಸದಸ್ಯ ಪೀಠವು ಎರಡು ತಿಂಗಳ ಗಡುವು ವಿಧಿಸಿತ್ತು. ಆನಂತರ ನಿವೃತ್ತರಾಗಿರುವ ಅರ್ಜಿದಾರರು 2021ರ ಜನವರಿ 15 ಮತ್ತು 2021ರ ಜೂನ್‌ 16ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಇಲ್ಲದಿದ್ದಾಗ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು ಎನ್ನುವುದನ್ನು ಆದೇಶದಲ್ಲಿ ವಿವರಿಸಲಾಗಿದೆ.