ಮನೆ ರಾಜ್ಯ ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ: ಮಾಜಿ ಸಚಿವ ಅಶ್ವಥ್ ನಾರಾಯಣ್

ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ: ಮಾಜಿ ಸಚಿವ ಅಶ್ವಥ್ ನಾರಾಯಣ್

0

ಮಂಡ್ಯ: ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಸರ್ಕಾರ ರೈತ ವಿರೋಧಿ ನಿಲುವು ತೆಗೆದುಕೊಳ್ಳುತ್ತಿದೆ. ರಾಜ್ಯದ ರೈತರಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ‌ ಮಾಡ್ತಿದೆ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಮಂಡ್ಯದಲ್ಲಿಂದು ಕೆಸಿ.ನಾರಾಯಣಗೌಡ ಅವರೊಂದಿಗಿನ ಜಂಟಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಕುಡಿಯುವ ನೀರಿನ ವಿಚಾರದಲ್ಲಿ ಮೈಮರೆತಿದೆ. ಆದರೂ ದುರಹಂಕಾರದ ಮಾತುಗಳ ಆಡ್ತಿದ್ದಾರೆ. ಇವರಿಗೆ ಕಿಂಚಿತ್ತೂ ರಾಜ್ಯದ ಮೇಲೆ ಕಾಳಜಿ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಮಾಡದ ಇದೂ ಒಂದು ಸರ್ಕಾರವೇ.?  ಎಂದು ಪ್ರಶ್ನಿಸಿದರು.

ಕೆ.ಆರ್‌.ಎಸ್ ನಿಂದ ತಮಿಳುನಾಡಿಗೆ ನೀರು ಬಿಡಬಾರದಿತ್ತು. ತಮಿಳುನಾಡಿನವರ ಓಲೈಸಲು ಇವರೇ ನೀರು ಬಿಡ್ತಿದ್ದಾರೆ. ಡಿಎಂಕೆ ಜೊತೆ ಸೇರಿ ರಾಜ್ಯಕ್ಕೆ ಅನ್ಯಾಯ ಮಾಡ್ತಿದ್ದಾರೆ. ಕೋರ್ಟ್ ಗೆ ವಾಸ್ತವ ಸ್ಥಿತಿ ಆರ್ಥ ಮಾಡಿಸುವ ಕೆಲಸವನ್ನ ರಾಜ್ಯ ಸರ್ಕಾರ ಮಾಡಿಲ್ಲ. ನಮ್ಮ ಸರ್ಕಾರದಲ್ಲಿ ಯಾವತ್ತೂ ಕುಡಿಯುವ ನೀರಿನ ಅಭಾವ ಇರಲಿಲ್ಲ. ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ. ನೀರನ್ನ ಬಿಡಬೇಡಿ ಅಂತ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೀವಿ. ಕೋರ್ಟ್ ನಲ್ಲಿ ಸವಾಲುಗಳನ್ನ ಎದುರಿಸಬೇಕು. ಸೌಜನ್ಯವಾಗಿ ಈ ವಿಚಾರದಲ್ಲಿ ಮಾತನಾಡಿಲ್ಲ. ಕೇವಲ ದುರಹಂಕಾರದ ಮಾತುಗಳನ್ನ ಆಡ್ತಿದ್ದಾರೆ. ನೀರು ನಿರ್ವಹಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ ಎಂದರು.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಕೈ ತೋರಿಸುತ್ತಿರುವ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ವಿರುದ್ಧ ಗೂಬೆ ಕೂರಿಸೋಕೆ ಹೋಗಿ ಇವರೇ ಗೂಬೆಗಳಾಗಿದ್ದಾರೆ. ಪೆನ್ನು ಕೊಡಿ ಪೇಪರ್ ಕೊಡಿ ಅಂತ ಅಧಿಕಾರ ತಕೊಂಡ್ರು. ಈಗ ಪೆನ್ನು ಪೇಪರನ್ನ ಜೇಬಲ್ಲಿ ಇಟ್ಕೊಂಡು ಓಡಾಡ್ತಿದ್ದಾರೆ. ಅಧಿಕಾರದ ಅಮಲಿನಲ್ಲಿ ಮೈಮರೆತಿದ್ದಾರೆ. 135ಜನ ಗೆದ್ದಿದ್ದೀವಿ ಅಂತ ಆಕಾಶದಲ್ಲಿ ಹಾರಾಡ್ತಿದ್ದಾರೆ. ಭೂಮಿ‌ ಮೇಲಿನ ನೀರಿನ ಸಮಸ್ಯೆ ಕಾಣ್ತಿಲ್ಲ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ 100ದಿನ ಪೂರೈಸಿದ ಸಮಯದಲ್ಲಿ 100ಹಗರಣ ಮಾಡಿದೆ. ಜನವಿರೋಧಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಬೇಕಿದೆ. ವರ್ಗಾವಣೆ, ಭ್ರಷ್ಟಾಚಾರ ದಿಂದ ಸರ್ಕಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನಾಡ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಕೂಡಾ ಬೆಂಬಲ ಕೊಡ್ತಿದೆ. ಪ್ರತಿಯೊಂದು ವಿಚಾರದಲ್ಲೂ ಜನರಿಗೆ ಅನ್ಯಾಯ ಮಾಡ್ತಿದೆ ಎಂದು ಹರಿಹಾಯ್ದರು.

ಮಂಡ್ಯದಲ್ಲಿ ಇಂದು ಬಿಜೆಪಿ ಪದಾಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ಪಕ್ಷ ಸಂಘಟನೆ ಸಂಬಂಧ ಸಭೆ ನಡೆಸಲಾಗ್ತಿದೆ. ರಾಜ್ಯದಲ್ಲಿ ಪಕ್ಷವನ್ನು ಉಳಿಸಿಕೊಳ್ಳೊದು ಗೊತ್ತು, ಬೆಳೆಸೋದು ಗೊತ್ತು. ಪ್ರತಿ ಕ್ಷೇತ್ರದಲ್ಲಿ ಶಕ್ತಿ ತುಂಬುವ ಕೆಲಸ ಮಾಡ್ತೀವಿ. ಪಕ್ಷವನ್ನ ಮುಂದೆ ತೆಗೆದುಕೊಂಡು ಹೋಗುವ ಕೆಲಸ ಮಾಡ್ತೇವೆ. ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಕೆಲಸ ಮಾಡ್ತೀವಿ ಎಂದು ತಿಳಿಸಿದರು.

ಬಿಜೆಪಿಯ 30ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಮುಳುಗುವ ದೋಣಿ. ಅದಕ್ಕೆ ದಿಕ್ಕಿಲ್ಲ, ನಾಯಕತ್ವ ಇಲ್ಲ. ಆ ಪಕ್ಷಕ್ಕೆ ಯಾರು ಹೋಗ್ತಾರೆ. ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಸ್ಟ್ಯಾಟರ್ಜಿ ಇದೆ. ಮುಂದೆ ಆಯ್ಕೆ ಆಗಲಿದೆ ಎಂದು ತಿಳಿಸಿದರು.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿ, ಮೈತ್ರಿ ಬಗ್ಗೆ ಅಧಿಕೃತವಾಗಿ ಯಾವುದೇ ತೀರ್ಮಾನ ಆಗಿಲ್ಲ. ಅಧಿಕೃತವಾಗಿ ಈ ಬಗ್ಗೆ ತೀರ್ಮಾನ ಆದಾಗ ಮುಂದಿನ ಚರ್ಚೆ ಆಗುತ್ತೆ. ಅಲ್ಲಿಯವರೆಗೂ ಇದು ಕೇವಲ ಸುದ್ದಿಯಾಗಿಯೇ ಇರುತ್ತೆ. ರಾಜ್ಯದ ವಿಚಾರ ಕುರಿತು ಕೇಂದ್ರದ ನಾಯಕರು ಮಾತುಕತೆಗೆ ಕರೆದಿದ್ದಾರೆ. ಬಿಎಸ್ ಯಡಿಯೂರಪ್ಪ ಅವರು ದೆಹಲಿಗೆ ಹೋಗ್ತಿದ್ದಾರೆ. ಅಲ್ಲಿ ಈ ಬಗ್ಗೆ ಚರ್ಚೆ ಮಾಡಿ ನಮ್ಮ ನಾಯಕರು ನಿರ್ಧಾರ ಮಾಡ್ತಾರೆ ಎಂದು ಹೇಳಿದರು.

ಸ್ವಪಕ್ಷದ ವಿರುದ್ದವೇ ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿಚಾರ ಕುರಿತು ಮಾತನಾಡಿ, ಕಾಂಗ್ರೆಸ್ ಸರ್ಕಾರ ಮೊದಲು ಹರಿಪ್ರಸಾದ್ ಹೇಳಿಕೆಗೆ ಪ್ರತ್ಯುತ್ತರ ಕೊಡಲಿ. ಸಿಎಂ ಸಿದ್ದರಾಮಯ್ಯಗೆ ಶಕ್ತಿ ಇದ್ರೆ, ಸ್ವಾಭಿಮಾನ ಇದ್ರೆ ಉತ್ತರ ಕೊಡಿ. ಬಸವರಾಜ ರಾಯರೆಡ್ಡಿ ಕೂಡಾ ಆಪಾದನೆ ಮಾಡಿದ್ರು. ಸರ್ಕಾರದಲ್ಲಿ ಇದಕ್ಕೆ ಉತ್ತರ ಇದ್ಯಾ.? ಎಲ್ಲದರಲ್ಲೂ ಕಾಂಗ್ರೆಸ್ ಭ್ರಷ್ಟಾಚಾರ, ದಂಧೆ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗಲ್ಲ: ಮಾಜಿ ಸಚಿವ ನಾರಾಯಣಗೌಡ ಸ್ಪಷ್ಟನೆ

ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗಲ್ಲ. ನಾನು ಎಲ್ಲಿಯೂ ಈ ಬಗ್ಗೆ ಹೇಳಿಲ್ಲ. ಚುನಾವಣೆಗೂ‌ ಮೊದಲು ಇದೇರೀತಿ ಅಪಪ್ರಚಾರ ಆಯ್ತು. ಈಗಲೂ ಅದೇರೀತಿಯ ಕೆಲಸ ಆಗ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ನಾರಾಯಣಗೌಡ ಸ್ಪಷ್ಟಪಡಿಸಿದರು.

ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆಂಬ ವಿಚಾರವಾಗಿ ಮಾತನಾಡಿ, ನಾನು ಮೋದಿಯವರ ನೇತೃತ್ವದ ಬಿಜೆಪಿಯಲ್ಲೇ ಇರ್ತಿನಿ ಎಂದು ತಿಳಿಸಿದರು.

ಕಳೆದ ಒಂದುವರೆ ತಿಂಗಳು ಬಾಂಬೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಇಂದು ಪಕ್ಷದ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಈ ವಿಚಾರದಲ್ಲಿ ಗೊಂದಲ ಸೃಷ್ಟಿ ಬೇಡ ಎಂದು ಮಾಜಿ ಸಚಿವ ನಾರಾಯಣಗೌಡ ಹೇಳಿದರು.