ಮನೆ ಕಾನೂನು ತಾ.ಪಂ, ಜಿ.ಪಂಗಳಿಗೆ ಮೀಸಲು ಪ್ರಕಟಿಸದ ಸರ್ಕಾರ: ಚು.ಆಯೋಗದಿಂದ ನ್ಯಾಯಾಂಗ ನಿಂದನೆ ಅರ್ಜಿ

ತಾ.ಪಂ, ಜಿ.ಪಂಗಳಿಗೆ ಮೀಸಲು ಪ್ರಕಟಿಸದ ಸರ್ಕಾರ: ಚು.ಆಯೋಗದಿಂದ ನ್ಯಾಯಾಂಗ ನಿಂದನೆ ಅರ್ಜಿ

0

ಬೆಂಗಳೂರು: ಈ ಹಿಂದೆ ಸರ್ಕಾರ ನೀಡಿದ್ದ ಭರವಸೆಯಂತೆ ನಿಗದಿತ ಅವಧಿಯಲ್ಲಿ ರಾಜ್ಯದಲ್ಲಿನ ಜಿ.ಪಂ ಹಾಗೂ ತಾ.ಪಂ ಕ್ಷೇತ್ರಗಳಿಗೆ ಮೀಸಲಾತಿ ಅಂತಿಮಗೊಳಿಸದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಈ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಸಿತು.

Join Our Whatsapp Group

ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರು, ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ಸರ್ಕಾರ ನಡೆದುಕೊಂಡಿಲ್ಲ. ಆದ್ದರಿಂದ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಅದಕ್ಕೆ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ಈ ವಿಚಾರವಾಗಿ ಅಡ್ವೋಕೇಟ್ ಜನರಲ್ ವಾದ ಮಂಡಿಸಲಿದ್ದಾರೆ. ಹಾಗಾಗಿ, ಕಾಲಾವಕಾಶಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿತು.

ರಾಜ್ಯದ ಜಿ.ಪಂ., ತಾ.ಪಂ ಕ್ಷೇತ್ರಗಳ ಭೌಗೋಳಿಕ ಗಡಿಗಳನ್ನು ನಿರ್ಧರಿಸುವ ಹಾಗೂ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ. ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದ 30 ಜಿಲ್ಲೆಗಳ ಕ್ಷೇತ್ರ ಪುನರ್‌ವಿಂಗಡಣೆ ಅಧಿಸೂಚನೆಯನ್ನು ಡಿ. 19 ಪ್ರಕಟಿಸಲಾಗುವುದು.

ಮುಂದಿನ ಏಳು ದಿನಗಳಲ್ಲಿ ಕೊಡಗು ಜಿಲ್ಲೆಯ ಕ್ಷೇತ್ರ ಪುನರ್‌ವಿಂಗಡಣೆ ಅಧಿಸೂಚನೆ ಪ್ರಕಟಿಸಲಾಗುವುದು. ಇದಾದ ಏಳು ದಿನಗಳಲ್ಲಿ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಲಾಗುವುದು. ಮೀಸಲಾತಿ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶ ನೀಡಲಾಗುವುದು. ಅದಾದ ಎರಡು ವಾರಗಳಲ್ಲಿ ಮೀಸಲಾತಿ ಅಂತಿಮಗೊಳಿಸಲಾಗುವುದು ಎಂದು ಸರ್ಕಾರ 2023ರ ಡಿ.19ರಂದು ಭರವಸೆ ಕೊಟ್ಟಿತ್ತು.

ಈ ಕುರಿತು ನಿರ್ದೇಶನ ನೀಡಿದ್ದ ನ್ಯಾಯಾಲ ಇದನ್ನು ದಾಖಲಿಸಿಕೊಂಡು, ಸರ್ಕಾರಕ್ಕೆ ನಿರ್ದೇಶನ ನೀಡಿದ್ದ ನ್ಯಾಯಾಲಯ ಅರ್ಜಿಯನ್ನು ಇತ್ಯರ್ಥ ಪಡಿಸಿತ್ತು. ಜತೆಗೆ ಸರ್ಕಾರ ನೀಡಿದ ಭರವಸೆಯಂತೆ ನಡೆದುಕೊಳ್ಳದಿದ್ದರೆ ಚುನಾವಣಾ ಆಯೋಗ ನ್ಯಾಯಾಲಯದ ಮೊರೆ ಹೋಗಬಹುದು ಎಂದೂ ನ್ಯಾಯಾಲಯ ಹೇಳಿತ್ತು.

ಇದೀಗ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ತಾ.ಪಂ. ಜಿ.ಪಂ ಕ್ಷೇತ್ರಗಳ ಮೀಸಲಾತಿ ಅಂತಿಮಗೊಳಿಸಿಲ್ಲ. ಆದ್ದರಿಂದ ೨೦೨೩ರ ಡಿ.19 ರಂದು ನ್ಯಾಯಾಲಯ ನೀಡಿದ ಅಂತಿಮ ಆದೇಶ ಪಾಲಿಸದ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸಬೇಕು ಎಂದು ಚುನಾವಣಾ ಆಯೋಗ ಮನವಿ ಮಾಡಿದೆ.