ಮನೆ ಕೃಷಿ ಭತ್ತ, ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿ

ಭತ್ತ, ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿ

0

ಮೈಸೂರು(Mysuru): ಭತ್ತ ಮತ್ತು ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿಪಡಿಸಲಾಗಿದ್ದು, ಅದರಂತೆಯೇ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದರು.

ಕಟಾವು ಯಂತ್ರಗಳ ಮಾಲೀಕರು ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇಲ್ಲಿ ಶುಕ್ರವಾರ ರೈತ ಮುಖಂಡರು, ಕಟಾವು ಯಂತ್ರಗಳ ಮಾಲೀಕರು ಮತ್ತು ಏಜೆಂಟರ ಸಭೆ ನಡೆಸಿ ಅವರು ಮಾತನಾಡಿದರು.

ಮೈಸೂರು ಜಿಲ್ಲೆಯಲ್ಲಿ 2022-23 ನೇ ಸಾಲಿನ ಮುಂಗಾರು ಹಂಗಾಮಿನ 1,06,222 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಆವರಿಸಿದ್ದು, ಈಗಾಗಲೇ ಕಟಾವು ಪ್ರಾರಂಭವಾಗಿರುತ್ತದೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಭತ್ತ ಕಟಾವು ಯಂತ್ರದಿಂದ ಕಟಾವು ಮಾಡಲು ಪ್ರತಿ ಗಂಟೆಗೆ ಚೈನ್ ಮಾದರಿಗೆ ರೂ. 2400 ಮತ್ತು ಟೈರ್ ಮಾದರಿಗೆ ರೂ. 1800 ಗಳವರೆಗೆ ದರವನ್ನು ನಿಗದಿ ಪಡಿಸಲಾಗಿತ್ತು. ಆದರೆ ಕಟಾವು ಯಂತ್ರದ ಮಾಲೀಕರುಗಳು ರೈತರಿಂದ ಹೆಚ್ಚಿನ ಹಣವನ್ನು ಪಡೆಯುತ್ತಿರುವುದಾಗಿ ದೂರು ಬಂದಿರುತ್ತದೆ. ಇದರಿಂದ ರೈತರಿಗೆ ಸಂಕಷ್ಟದ ಸಮಯದಲ್ಲಿ ಹೆಚ್ಚಿನ ಆರ್ಥಿಕ ಹೊರೆಯಾಗಿರುತ್ತದೆ. ಜಿಲ್ಲಾಧಿಕಾರಿಗಳು ಆರ್.ಟಿ.ಒ ಅಧಿಕಾರಿಗಳಿಗೆ ತಮಿಳುನಾಡಿನಿಂದ ಕರ್ನಾಟಕ ರಾಜ್ಯಕ್ಕೆ ಆಗಮಿಸುವಾಗ, ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

ಹಾಗೆಯೇ ಪೋಲೀಸ್ ಇಲಾಖೆ ಕೂಡ ಸಹಕರಿಸಲು ಸಭೆಯಲ್ಲಿ ಹಾಜರಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಸೂಚನೆ ನೀಡಿದರು. ಸಭೆಯಲ್ಲಿ ಹಾಜರಿದ್ದ ರೈತರು, ರೈತ ಮುಖಂಡರು, ಯಂತ್ರದ ಮಾಲೀಕರು ಮತ್ತು ಏಜೆಂಟ್ ಅಭಿಪ್ರಾಯವನ್ನು ಸಂಗ್ರಹಿಸಲಾಗಿ 2022ರ ಡಿಸೆಂಬರ್ 08 ರಂದು ಈ ಕಚೇರಿಯಲ್ಲಿ ಸಭೆ ನಡೆಸಿ ಅಂತಿಮವಾಗಿ ಚೈನ್ ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ರೂ. 2500 ಟೈರ್ (ಗ್ರೀಪ್) ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ರೂ. 2000 ಗಳಂತೆ ಟೈರ್ (ಸಾಮಾನ್ಯ) ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ರೂ. 1800 ಗಳಂತೆ ಹಾಗೂ ರಾಗಿ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ರೂ. 2900 ಗಳಂತೆ ನಿಗದಿಪಡಿಸಿದೆ.

ಅತಿವೃಷ್ಠಿ ಸಂಕಷ್ಟದ ಸಂದರ್ಭದಲ್ಲಿ ಕಟಾವು ಯಂತ್ರದ ಮಾಲೀಕರು ಸಹಕರಿಸಲು ಕೋರಿದ್ದು, ತಪ್ಪಿದಲ್ಲಿ ರೈತರು ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ-2005ರ ಪ್ರಕಾರ ಸಂಬಂಧಪಟ್ಟ ತಹಶೀಲ್ದಾರರಿಗೆ/ಪೋಲೀಸ್ ಇಲಾಖೆ/ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಇವರಿಗೆ ದೂರು ನೀಡಲು ತಿಳಿಸಲಾಯಿತು.

ಸದರಿ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್‌’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಜಂಟಿ ಕೃಷಿ ನಿರ್ದೇಶಕರು, ಉಪ ಕೃಷಿ ನಿರ್ದೇಶಕರು, ಉಪ ಕೃಷಿ ನಿರ್ದೇಶಕರು ಹುಣಸೂರು, ಆರ್.ಟಿ.ಒ ಅಧಿಕಾರಿಗಳು, ಎಲ್ಲಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳು ಹಾಗೂ ರೈತ ಮುಖಂಡರಾದ ಕೆ.ಕುಮಾರಸ್ವಾಮಿ, ಕೆ.ಟಿ.ಅಂಗರಾಜು, ವಿದ್ಯಾಸಾಗರ್, ಕುರುಬೂರು ಸಿದ್ದೇಶ್, ಕೆ.ಎಸ್.ಸ್ವಾಮಿಗೌಡ, ಸತೀಶ್ ಹಾಗೂ ಇತರ ರೈತ ಮುಖಂಡರುಗಳು ಸಭೆಯಲ್ಲಿ ಹಾಜರಿದ್ದರು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಮೈಸೂರಿನಲ್ಲೊಬ್ಬ ಖತರ್ನಾಕ್ ವಂಚಕ: ಕಸ್ಟಮ್ ಆಫೀಸರ್ ಅಂತ ವಂಚಿಸಿ ಲಕ್ಷಾಂತರ ರೂಪಾಯಿ ‘ಉಂಡೆ ನಾಮ’
ಮುಂದಿನ ಲೇಖನಜೀವ ಹಾಗೂ ಜೀವನಕ್ಕಾಗಿ ಹೋರಾಡುತ್ತಿರುವ ಮಕ್ಕಳ ರಕ್ಷಣೆ ಮಾಡಿ: ನಾಗಣ್ಣಗೌಡ