ಮನೆ ರಾಜ್ಯ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ರೂಪಿಸಲು ಮುಂದಾದ ಸರ್ಕಾರ

ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ರೂಪಿಸಲು ಮುಂದಾದ ಸರ್ಕಾರ

0

ಬೆಂಗಳೂರು(Bengaluru): ‘ಶಿಕ್ಷಕ ಸ್ನೇಹಿ’ವರ್ಗಾವಣೆ ನೀತಿ ರೂಪಿಸಲು ಸರ್ಕಾರ ಮುಂದಾಗಿದೆ.

ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ ತಿದ್ದುಪಡಿ ಮಸೂದೆಗೆ ಸೋಮವಾರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಇದೇ ಅಧಿವೇಶನದಲ್ಲಿ ಮಂಡನೆ ಯಾಗಲಿದೆ.

ಪರಸ್ಪರ ವರ್ಗಾವಣೆಗೆ ಒಂದು ಬಾರಿ ಮಾತ್ರ ಅವಕಾಶ ಇತ್ತು. ಇನ್ನುಮುಂದೆ ಆ ನಿರ್ಬಂಧ ಇರುವುದಿಲ್ಲ. ಆದರೆ, ಕೆಲಸಕ್ಕೆ ಸೇರಿದ ಮೊದಲ ಐದು ವರ್ಷ ಹಾಗೂ ನಿವೃತ್ತಿಗೆ ಮೊದಲಿನ ಐದು ವರ್ಷ ಮಾತ್ರ ಅವಕಾಶ ಇರುವುದಿಲ್ಲ. ಆದರೆ, ಒಮ್ಮೆ ವರ್ಗಾವಣೆಯಾದ ಬಳಿಕ ಮತ್ತೆ ಮೂರು ವರ್ಷ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಕಲ್ಯಾಣ ಕರ್ನಾಟಕದ ಜಿಲ್ಲೆಗಳು (377 ಜೆ ಅನ್ವಯ), ಮಲೆನಾಡು ವಲಯ ಹಾಗೂ ನಂಜುಂಡಪ್ಪ ವರದಿಯ ಅನ್ವಯ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎಂದು ಗುರುತಿಸಲಾಗಿರುವ ತಾಲ್ಲೂಕುಗಳಿಗೆ ಹೋಗಬಯಸುವವರಿಗೆ ವಿಶೇಷ ಆದ್ಯತೆ ಸಿಗಲಿದೆ.

ಸಾರ್ವತ್ರಿಕ ವರ್ಗಾವಣೆ ಒಟ್ಟು ವೃಂದ ಬಲದ ಶೇ 11ರಷ್ಟು ಮಿತಿ ಇರುತ್ತದೆ. ವಿಶೇಷ ಆದ್ಯತೆಯಡಿ ವರ್ಗಾವಣೆ ಬಯಸುವವರಿಗೆ ಈ ನಿಯಮ ಅನ್ವಯವಾಗದು. ಉಳಿದೆಲ್ಲ ನಿಯಮಗಳು ಮುಂದುವರಿಯಲಿವೆ.

ಯಾವುದೇ ಒಂದು ಘಟಕ ಹಾಗೂ ವೃಂದದಲ್ಲಿ ಕನಿಷ್ಠ 10 ವರ್ಷ ಅಥವಾ ಎಲ್ಲ ವೃಂದಗಳೂ ಸೇರಿ 15 ವರ್ಷ ಕೆಲಸ ಮಾಡಿದ ಶಿಕ್ಷಕರನ್ನು ಶೇ 25ರಷ್ಟು ಮಿತಿಯ ಒಳಗೆ ಖಾಲಿ ಹುದ್ದೆಗಳಿರುವ ತಾಲ್ಲೂಕಿಗೆ ವರ್ಗಾವಣೆಗೆ ಅವಕಾಶ ಇರುತ್ತದೆ.