ಬೆಂಗಳೂರು (Bengaluru)- ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಖುದ್ದು ಹಾಜರಾತಿಯಿಂದ ವಿಶೇಷ ನ್ಯಾಯಾಲಯ ವಿನಾಯಿತಿ ನೀಡಿದೆ.
ವೈದ್ಯಕೀಯ ಕಾರಣಗಳಿಗಾಗಿ ಬಿಎಸ್ವೈ ಅವರಿಗೆ ನ್ಯಾಯಾಲಯದಿಂದ ಈ ವಿನಾಯಿತಿ ಸಿಕ್ಕಿದೆ. ಪ್ರಕರಣ ಜೂನ್ 17ಕ್ಕೆ ಮುಂದೂಡಲ್ಪಟ್ಟಿದೆ.
79 ವರ್ಷದ ಯಡಿಯೂರಪ್ಪ ಅವರಿಗೆ ನ್ಯೂಮೋನಿಯಾ ಇದ್ದು, ವೈದ್ಯರು 10 ದಿನಗಳ ಕಾಲ ಬೆಡ್ ರೆಸ್ಟ್ ಗೆ ಸಲಹೆ ನೀಡಿರುವುದಾಗಿ ಅವರ ಪರ ವಕೀಲರು ವೈದ್ಯಕೀಯ ಪ್ರಮಾಣ ಪತ್ರವೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಅದನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯವು ಬಿಎಸ್ವೈ ಅವರಿಗೆ ಖುದ್ದು ಹಾಜರಾತಿಗೆ ವಿನಾಯಿತಿ ನೀಡಿತು ಮತ್ತು ಪ್ರಕರಣವನ್ನು ಜೂನ್ 17 ಕ್ಕೆ ಮುಂದೂಡಿತು. ಮುಂದಿನ ವಿಚಾರಣೆಯ ದಿನದಂದು ಯಡಿಯೂರಪ್ಪ ಖುದ್ದು ಹಾಜರಾಗಬೇಕು ಎಂದು ಹೇಳಿತು.
ರಾಜ್ಯದ ಶಾಸಕರಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳನ್ನು ವಿಶೇಷ ನ್ಯಾಯಾಲಯ ಪ್ರತ್ಯೇಕವಾಗಿ ಪರಿಗಣಿಸಿದೆ. 2006ರಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಬೆಂಗಳೂರಿನ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ವಾಸುದೇವ ರೆಡ್ಡಿ ಅವರು 2013ರಲ್ಲಿ ಖಾಸಗಿ ದೂರು ದಾಖಲಿಸಿದ್ದರು.