ಮೈಸೂರು,: ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲದ ಈ ಸಂದರ್ಭದಲ್ಲಿ ಜನರ ಆರೋಗ್ಯ ಹಿತದೃಷ್ಟಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಾಲ್ಲೂಕಿನ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಸರಗೂರು ತಾಲ್ಲೂಕಿನ 13 ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಆರೋಗ್ಯ ಅಭಿಯಾನದಡಿ ಮೇ. 22 ರಿಂದ ಜೂನ್ 22 ರವರೆಗೆ ಒಂದು ತಿಂಗಳ ಕಾಲ ಆರೋಗ್ಯ ಶಿಬಿರ ನಡೆಸಲಾಗಿದ್ದು, ನರೇಗಾ ಕೂಲಿ ಕಾರ್ಮಿಕರಿಗೆ ಹಾಗೂ ಹಿರಿಯ ನಾಗರೀಕರು, ವಿಶೇಷಚೇತನರಿಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹಿಮೋಗ್ಲೋಬಿನ್ ಪ್ರಮಾಣ, ತೂಕ, ಶೀತ, ಕೆಮ್ಮು, ನಗಡಿಯಂತಹ ಖಾಯಿಲೆ ತಪಾಸಣೆ ನಡೆಸಲಾಯಿತು.
ತಾಲ್ಲೂಕಿಗೆ 5,590 ಮಂದಿಗೆ ತಪಾಸಣೆ ನಡೆಸುವಂತೆ ಗುರಿ ನೀಡಲಾಗಿತ್ತು, ಇದೀಗ ಒಂದು ತಿಂಗಳಿಗೆ 5338 ಮಂದಿಗೆ ತಪಾಸಣೆ ನಡೆಸಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದಿದೆ. ಇದರಲ್ಲಿ 2415 ಪುರುಷರು ಹಾಗೂ 2923 ಮಹಿಳೆಯರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ. ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದವರನ್ನು ಹೆಚ್ಚಿನ ಚಿಕಿತ್ಸೆಗೆ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡುವಂತೆ ತಿಳಿಸಲಾಗಿದೆ.
ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಸುಷ್ಮಾ ಅವರು ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಿ, ಅವರಿಗೆ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ತಿಳಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿತ್ತು. ಅದರಂತೆ ತಾಲ್ಲೂಕಿನ ಗ್ರಾಮ ಪಂಚಾಯತಿ ವ್ಯಾಪ್ತಿ ಶಿಬಿರಗಳನ್ನು ಆಯೋಜಿಸಿ ಜಿಲ್ಲೆಯಲ್ಲಿಯೇ ಉತ್ತಮ ಪ್ರಗತಿ ಸಾಧಿಸಿದ್ದೇವೆ, ಮುಂದೆ ಇದೇ ರೀತಿ ಶಿಬಿರಗಳನ್ನು ಆಯೋಜಿಸಿ ಕೂಲಿ ಕಾರ್ಮಿಕರಿಗೆ ಆರೋಗ್ಯ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಲಿದ್ದೇವೆ ಎಂದು ಸಂತಸ ಹಂಚಿಕೊoಡರು.
ಗ್ರಾಮ ಆರೋಗ್ಯ ಅಭಿಯಾನಕ್ಕೆ ನರೇಗಾ ಕೂಲಿ ಕಾರ್ಮಿಕರು ಹರ್ಷ ವ್ಯಕ್ತಪಡಿಸಿದ್ದು, ಮೊದಲೆಲ್ಲಾ ಅನಾರೋಗ್ಯ ಬಂದಾಗ ತಾಲ್ಲೂಕು ಆಸ್ಪತ್ರೆಗೆ ಹೋಗುತ್ತಿದ್ದೆವು. ಇದರಿಂದ ತುಂಬಾ ತೊಂದರೆ ಆಗುತ್ತಿತ್ತು. ಇದೀಗ ನಮಗೆ ನಮ್ಮ ಗ್ರಾಮಗಳಲ್ಲಿಯೇ ಆರೋಗ್ಯ ತಪಾಸಣೆ ಮಾಡಿಸಿಕೊಂಡು ನಮಗೆ ಏನು ಸಮಸ್ಯೆ ಇದೆ ಎಂಬುದು ತಿಳಿದುಕೊಳ್ಳಲು ಉಪಯುಕ್ತವಾಗಿದೆ. ಇನ್ನೂ ಹೆಚ್ಚಿನ ಶಿಬಿರಗಳು ಗ್ರಾಮಗಳಲ್ಲಿ ನಡೆಯಬೇಕು ಎಂದು ತಿಳಿಸಿದರು.