ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆ ₹5,300 ಕೋಟಿ ಅನುದಾನ ಒದಗಿಸಿದ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಧನ್ಯವಾದ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ ಅವರು, ಈ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಅನುದಾನ ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಮಸ್ತ ಕರ್ನಾಟಕದ ಪರವಾಗಿ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವ ಗೋವಿಂದ ಕಾರಜೋಳ, ಭದ್ರಾ ಮೇಲ್ಡಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿ 5300 ಕೋಟಿ ಅನುದಾನ ನೀಡಿದೆ. ಈ ಅನುದಾನವನ್ನು ಬರ ಪೀಡಿತ ಜಿಲ್ಲೆಗಳ ಕೃಷಿಕರಿಗೆ ಹಾಗೂ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಜಿಲ್ಲೆಗಳಿಗೆ ಯೋಜನೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಸಿಕ್ಕ ದೊಡ್ಡ ಆರ್ಥಿಕ ನೆರವಾಗಿದೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.
ದೇಶದ ಇತಿಹಾಸದಲ್ಲಿ ಯಾವ ರಾಜ್ಯಕ್ಕೂ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ನೀಡಿ ಕೇಂದ್ರ ಸರ್ಕಾರ ಇಷ್ಟು ದೊಡ್ಡ ಮಟ್ಟದ ಹಣ ನೀಡಿಲ್ಲ. ಇದಕ್ಕಾಗಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ನೀರಾವರಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ನಿರ್ಮಲಾ ಸೀತಾರಾಮನ್ ಅವರು ಇಂದು 2023–24ನೇ ಸಾಲಿನ ಬಜೆಟ್ ಮಂಡನೆ ಮಂಡಿಸುತ್ತಿದ್ದಾರೆ.
ಈ ವರ್ಷದ ಶೇಕಡ 7ರಷ್ಟು ಬೆಳವಣಿಗೆ ದರಕ್ಕೆ ಹೋಲಿಸಿದರೆ, ಭಾರತದ ಆರ್ಥಿಕತೆಯು 2023–24ರ ಆರ್ಥಿಕ ವರ್ಷದಲ್ಲಿ ಶೇ. 6.5ರಷ್ಟು ಬೆಳವಣಿಗೆಯಾಗಲಿದೆ. 2021–22ರಲ್ಲಿ ಈ ದರ ಶೇಕಡ 8.7ರಷ್ಟಿತ್ತು. ಭಾರತವು ಈಗಲೂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ.