ಬೆಂಗಳೂರು : ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಜಿಟಿ ದೇವೇಗೌಡರಿಗೆ ಕೊನೆಗೂ ಜೆಡಿಎಸ್ ಶಾಕ್ ಕೊಟ್ಟಿದೆ. ಜಿಟಿ ದೇವೇಗೌಡರಿಗೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ಕೊಕ್ ನೀಡಲಾಗಿದೆ. ನೂತನ ಕೋರ್ ಕಮಿಟಿ ಅಧ್ಯಕ್ಷರಾಗಿ ಮಾಜಿ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ನೇಮಕ ಮಾಡಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.
ಜಿಟಿ ದೇವೇಗೌಡರು ಕೋರ್ ಕಮಿಟಿ ಅಧ್ಯಕ್ಷ ಆಗಿದ್ದರೂ ಯಾವುದೇ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಅಲ್ಲದೇ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಪಕ್ಷದ ನಾಯಕರ ವಿರುದ್ಧವೇ ಮಾತನಾಡುತ್ತಿದ್ದರು. ಅಂತಿಮವಾಗಿ ಜಿಟಿ ದೇವೇಗೌಡರನ್ನು ಬಿಟ್ಟು ಕೃಷ್ಣಾರೆಡ್ಡಿಗೆ ಜೆಡಿಎಸ್ ವರಿಷ್ಠರು ಸ್ಥಾನ ನೀಡಿದ್ದಾರೆ.
20 ಸದಸ್ಯರು ಒಳಗೊಂಡ ಕೋರ್ ಕಮಿಟಿ, 16 ಸದಸ್ಯರು ಒಳಗೊಂಡ ಪ್ರಚಾರ ಸಮಿತಿ ರಚನೆ ಮಾಡಿದ್ದು, ಹಾಲಿ,ಮಾಜಿ ಶಾಸಕರು,ಸಚಿವರು, ಪಕ್ಷದ ಹಿರಿಯ ನಾಯಕರಿಗೆ ಕಮಿಟಿಗಳಲ್ಲಿ ಸ್ಥಾನ ನೀಡಲಾಗಿದೆ. ಹೆಚ್‌ಡಿ ರೇವಣ್ಣಗೆ ಕೋರ್ ಕಮಿಟಿಯಲ್ಲಿ ಸ್ಥಾನ ನೀಡಲಾಗಿದೆ.ಪ್ರಚಾರ ಸಮಿತಿಯಲ್ಲಿ ಸೂರಜ್ ರೇವಣ್ಣಗೆ ಸ್ಥಾನ ಕೊಟ್ಟರೆ ಜಿಟಿ ದೇವೇಗೌಡ ಪುತ್ರ ಹರೀಶ್ ಗೌಡಗೆ ಪ್ರಚಾರ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.
ಕೋರ್ ಕಮಿಟಿ ಜೊತೆ ಜೆಡಿಎಸ್ ರಾಜಕೀಯ ವ್ಯವಹಾರಗಳ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಪಾಲನ ಸಮಿತಿಗಳಿಗೂ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಲಾಗಿದೆ. ರಾಜಕೀಯ ವ್ಯವಹಾರ ಸಮಿತಿಗೆ ಕುಮಾರಸ್ವಾಮಿ ಅವರನ್ನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಪ್ರಚಾರ ಸಮಿತಿಗೆ ವೈ.ಎಸ್.ವಿ. ದತ್ತಾ, ಶಿಸ್ತುಪಾಲನ ಸಮಿತಿಗೆ ಮಾಜಿ ಸಚಿವ ನಾಗರಾಜಯ್ಯ ಅವರನ್ನು ನೇಮಕ ಮಾಡಲಾಗಿದೆ.














