ಮೈಸೂರು(Mysuru) : ಶಾಸಕ ಜಿ.ಟಿ.ದೇವೇಗೌಡರ ಮೊಮ್ಮಗಳು ಗೌರಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರದ ಮೂಲಕ ಸಾಂತ್ವಾನ ಹೇಳಿದ್ದರು. ಇದಕ್ಕೆ ಶಾಸಕ ಜಿ.ಟಿ.ದೇವೇಗೌಡರು ಮೋದಿಗೆ ಧನ್ಯವಾದ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಜೀ ಅವರು ನಮ್ಮ ಕುಟುಂಬದ ಕಂದನ ಆಕಸ್ಮಿಕ ನಿಧನದ ಸುದ್ದಿಯನ್ನು ತಿಳಿದು ತಮ್ಮೆಲ್ಲ ಕಾರ್ಯಗಳ ಮಧ್ಯೆಯೂ ಅತ್ಯಂತ ಅಂತಃಕರಣಪೂರಿತ ಸಂತಾಪ ಸೂಚನೆಯನ್ನು ಒಳಗೊಂಡ ಪತ್ರವೊಂದನ್ನು ಬರೆದು, ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ದುಃಖದಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿ ಕಂದನ ನಿಧನ ಅತ್ಯಂತ ದುಃಖಪೂರಿತವಾದುದೆಂದು, ನಿಧನದ ದುಃಖವನ್ನು ಸಹಿಸುವುದು ಅತ್ಯಂತ ಕಷ್ಟದಾಯಕವಾದುದೆಂದು ವಿವರಿಸಿ ಕಂದನ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲೆಂದು ಹಾರೈಸಿದ್ದಾರೆ. ಅದರ ಜತೆಗೆ ನನ್ನ ಮತ್ತು ನನ್ನ ಕುಟುಂಬಕ್ಕೆ ಕಂದನ ನಿಧನ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನನ್ನು ಪ್ರಾರ್ಥಿಸಿದ್ದಾರೆ.
ಪ್ರಧಾನಿಯವರ ಸಂತಾಪ ಸೂಚನೆ ನಮ್ಮಲ್ಲಿ ಅತ್ಯಂತ ಕೃತಜ್ಞತಾಭಾವನೆಯನ್ನು ಉಂಟು ಮಾಡಿದೆ. ರಾಷ್ಟ್ರದ ಬಗ್ಗೆ ಸದಾ ಚಿಂತಿಸುವ ಅತ್ಯಂತ ಉನ್ನತ ಸ್ಥಾನದಲ್ಲಿರುವ ಪ್ರಧಾನಿಯವರು ಕುಟುಂಬದಲ್ಲಾದ ದುರ್ಘಟನೆಯ ಬಗ್ಗೆ ಅತ್ಯಂತ ಕಾಳಜಿಯನ್ನು ವಹಿಸಿ, ಪತ್ರವನ್ನು ಬರೆಯುವ ಮೂಲಕ ನನಗೆ ಹಾಗೂ ಕುಟುಂಬದವರಿಗೆ ಧೈರ್ಯವನ್ನು ತುಂಬಿದುದಕ್ಕಾಗಿ ಹಾಗೂ ನಮ್ಮ ದುಃಖದಲ್ಲಿ ಪಾಲ್ಗೊಂಡಿದುದ್ದಕ್ಕಾಗಿ ನಾನು ಹಾಗೂ ನನ್ನ ಕುಟುಂಬದ ಎಲ್ಲಾ ಸದಸ್ಯರು ಪ್ರಧಾನಿ ನರೇಂದ್ರ ಮೋದಿಜೀ ರವರಿಗೆ ತುಂಬು ಹೃದಯದ ನಮನಗಳು ಎಂದು ಧನ್ಯವಾದ ತಿಳಿಸಿದ್ದಾರೆ.