ಮನೆ ರಾಜ್ಯ ‘ಗ್ಯಾರಂಟಿ’ ನಿಷೇಧ ಬಿಜೆಪಿ ಹಣೆಬರದಲ್ಲಿ ಸಾಧ್ಯವಿಲ್ಲ: ಡಿ ಕೆ ಶಿವಕುಮಾರ್

‘ಗ್ಯಾರಂಟಿ’ ನಿಷೇಧ ಬಿಜೆಪಿ ಹಣೆಬರದಲ್ಲಿ ಸಾಧ್ಯವಿಲ್ಲ: ಡಿ ಕೆ ಶಿವಕುಮಾರ್

0

ಬೆಂಗಳೂರು:  ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಿಷೇಧಿಸಲು ಬಿಜೆಪಿಯಿಂದ ಸಾಧ್ಯವಾಗದು. ಬಿಜೆಪಿಯ ಹಣೆಬರಹದಲ್ಲೇ ಅದು ಬರೆದಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.

Join Our Whatsapp Group

ಮಂಗಳವಾರವಷ್ಟೇ ಬಿಜೆಪಿ ತೊರೆದಿದ್ದ ಕರಡಿ ಸಂಗಣ್ಣ ಅವರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಗ್ಯಾರಂಟಿ ಮುಂದುವರಿಯಲ್ಲ ಎಂದು ಬಿಜೆಪಿಯವರು ಹೇಳ್ತಿದ್ದಾರೆ. ಆದರೆ, ಅವರ ಹಣೆಬರಹದಲ್ಲಿ ಗ್ಯಾರಂಟಿ ತೆಗೆಯಲು ಸಾಧ್ಯವಿಲ್ಲ. ಬಿಎಸ್ ಯಡಿಯೂರಪ್ಪ, ಅಶೋಕ್, ವಿಜಯೇಂದ್ರ ಎಲ್ಲರಿಗೂ ಈ ಮಾತನ್ನು ಹೇಳುತ್ತಿದ್ದೇನೆ ಎಂದರು.

ಸೋಲಿನ ಭಯದಿಂದಲೇ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ನಮ್ಮ ಕಾರ್ಯಕ್ರಮ ಬಿಜೆಪಿಯನ್ನು ತೊಳೆಯುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಗ್ಯಾರಂಟಿಯ ಪರ ದೊಡ್ಡ ಅಲೆ ಇದೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಬಿಜೆಪಿಯಲ್ಲಿ ಸುಮಾರು 100 ಸಂಸದರಿಗೆ ಈ ಬಾರಿ ಟಿಕೆಟ್ ಕೊಟ್ಟಿಲ್ಲ. ಗೆಲ್ಲುವುದಿಲ್ಲ ಎಂಬುದು ಸಮೀಕ್ಷೆಯಲ್ಲಿ ಗೊತ್ತಾಗಿರುವುರಿಂದ ಸಂಸದರಿಗೆ ಟಿಕೆಟ್ ನಿರಾಕರಿಸಿದ್ದಾರೆ. ಎನ್‌ಡಿಎ ಪರಿಸ್ಥಿತಿ ಏನು ಅಂತಾ ಇದರಲ್ಲೇ ಗೊತ್ತಾಗ್ತಿದೆ. ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎಂದು ಮೋದಿ ಹೇಳುತ್ತಾರೆ. ಆದರೆ, ಅವರ ಪಕ್ಷದವರು ಸಂವಿಧಾನ ಬದಲಿಸುತ್ತೇವೆ ಎಂದಿದ್ದಾರೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ 20 ಕ್ಕೂ ಹೆಚ್ಚು ಸೀಟು ನಾವು ಗೆಲ್ಲುತ್ತೇವೆ. ಸೋಲುವ ಭೀತಿಯಿಂದ ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೆಗೆ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದರು.

ಶಿವಮೊಗ್ಗದಲ್ಲಿ ಯಾವುದೇ ಕಾರಣಕ್ಕೂ ಯಡಿಯೂರಪ್ಪ ಪುತ್ರ ರಾಘವೇಂದ್ರ ಗೆಲ್ಲೋದಿಲ್ಲ. ಗೀತಾ ಶಿವಕುಮಾರ್ ಗೆಲ್ಲುತ್ತಾರೆ. ಇದು ಶಿವಮೊಗ್ಗ ಫಲಿತಾಂಶ ಎಂದು ಭರವಸೆ ವ್ಯಕ್ತಪಡಿಸಿದರು.