ಬೆಂಗಳೂರು: ಜೈಲಿನಲ್ಲಿರುವ ಕೈದಿಗಳಿಗೆ ಮನೆ ಊಟ ಹಾಗೂ ಇತರ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳುವ ಸಂಬಂಧ ಮಾರ್ಗಸೂಚಿಗಳನ್ನು ರೂಪಿಸುವುದಾಗಿ ಸೋಮವಾರ ಹೈಕೋರ್ಟ್ ಹೇಳಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ತಮಗೆ ಮನೆ ಊಟಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಆಗ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ನಟ ದರ್ಶನ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಹಾಜರಾಗಿ, ಅರ್ಜಿದಾರರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿರುವುದರರಿಂದ ಈಗ ಆ ಮನವಿ ಪ್ರಸ್ತುತವಾಗಲಿಕ್ಕಿಲ್ಲ. ಆದರೆ, ನ್ಯಾಯಾಲವೇ ಇದಕ್ಕೆಲ್ಲ ಮಾರ್ಗಸೂಚಿಗಳನ್ನು ರೂಪಿಸಬೇಕು ಅನಿಸುತ್ತದೆ. ಹಾಗಾಗಿ, ಆ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ನೆರವು ನೀಡಲು ತಾವು ಸಿದ್ಧ ಎಂದು ಹೇಳಿದರು. ಆಗ, ಹೌದು ಮಾರ್ಗಸೂಚಿ ರೂಪಿಸಲಾಗುವುದು. ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಿದ ನ್ಯಾಯಪೀಠ, ಅಂದು ಈ ವಿಚಾರವನ್ನು ಪರಿಗಣಿಸಲಾಗುವುದು ಎಂದು ಹೇಳಿದರು.
ಈ ಮಧ್ಯೆ ಇಂಥದ್ದೇ ಮನವಿ ಮಾಡಿ ಸಲ್ಲಿಸಲಾಗಿರುವ ಅರ್ಜಿದಾರರ ಪರ ವಕೀಲರೊಬ್ಬರು, ಊಟ ಬಿಟ್ಟು, ಇನ್ನೆಲ್ಲ ನಿಷೇಧಿತ ವಸ್ತುಗಳು ಜೈಲುಗಳಲ್ಲಿ ಸಿಗುತ್ತವೆ. ನಮ್ಮ ಮನೆ ಊಟ ನಾವು ತಿನ್ನಲು ಸಮಸ್ಯೆ ಮಾಡಲಾಗುತ್ತದೆ ಎಂದರು. ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿಮ್ಮ ಮನೆ ಊಟ ತಿನ್ನಲು ಯಾರೂ ಸಮಸ್ಯೆ ಮಾಡುವುದಿಲ್ಲ, ಇಲ್ಲಿ ಪ್ರಶ್ನೆ ಇರುವುದು ಜೈಲಿನಲ್ಲಿ ಮನೆ ಊಟ ಕೊಡಬೇಕಾ ಎನ್ನುವುದು ಎಂದು ಹೇಳಿತು.
ವಾದ ಮುಂದುವರಿಸಿದ ವಕೀಲರು, ಮನೆ ಊಟ ಅಷ್ಟೇ ಅಲ್ಲ, ಬೇರೆ ಸಮಸ್ಯೆಗಳೂ ಇವೆ. ಕೈದಿಗಳಿಗೆ ಹೊಟ್ಟೆ ನೋವು, ಕಿಡ್ನಿ ಸಮಸ್ಯೆ, ಹರ್ನಿಯಾ ಮತ್ತಿತರ ಸಮಸ್ಯೆಗಳಿವೆ. ಅವರಿಗೆ ಸೂಕ್ತ ಚಿಕಿತ್ಸೆ ಬೇಕು. 90 ವರ್ಷ ವೃದ್ಧೆಯೊಬ್ಬಳ್ಳಿಗೆ ಸರಿಯಾದ ಊಟ, ವೈದ್ಯಕೀಯ ಉಪಚಾರ ಸಿಗುತ್ತಿಲ್ಲ. ಕೈದಿಗಳಿಗೆ ಜೈಲುಗಳಲ್ಲಿ ಶಿಕ್ಷಣದ ವ್ಯವಸ್ಥೆ ಮಾಡುವ ಅವಶ್ಯಕತೆಯೂ ಇದೆ ಎಂದರು. ವಾದ ಆಲಿಸಿದ ನ್ಯಾಯಪೀಠ, ಆಯ್ತು. ಈ ಬಗ್ಗೆ ಮುಂದಿನ ವಿಚಾರಣೆ ವೇಳೆ ಪರಿಶೀಲಿಸೋಣ ಎಂದು ವಿಚಾರಣೆಯನ್ನು ಸೆ. 11ರಂದು ಸಂಜೆ 4 ಗಂಟೆಗೆ ಮುಂದೂಡಿತು.