ಹನೂರು : ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಳ್ಳರು ಮನೆಯೊಳಗೆ ನುಗ್ಗಿ , ಮನೆಯಲ್ಲಿಟ್ಟಿದ್ದ 500 ಗ್ರಾಂ ಚಿನ್ನಾಭರಣ ಹಾಗೂ 20 ಲಕ್ಷರೂ ನಗದನ್ನು ದೋಚಿ ಪರಾಗಿರಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಡಾಲರ್ಸ್ ಕಾಲೋನಿಯಲ್ಲಿ ತಡರಾತ್ರಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಅಂಚೆ ಕಚೇರಿ ಸಮೀಪದ ಡಾಲರ್ಸ್ ಕಾಲೋನಿಯಲ್ಲಿ ವಾಸವಾಗಿದ್ದ ಚಿನ್ನದೊರೆ ಮನೆಯಲ್ಲಿ ತಡರಾತ್ರಿ ಕಳ್ಳತನವಾಗಿದ್ದು, ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಮನೆಯಲ್ಲಿರುವವರು ತಮಿಳುನಾಡಿನ ಸಂಬಂಧಿಕರ ಮದುವೆಗೆ ತೆರಳಿದ್ದರು, ಇದನ್ನು ಸೂಕ್ಷ್ಮವಾಗಿ ಗಮನಿಸಿದ ಕಳ್ಳರು ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಕದ್ದು ಹೋಗಿದ್ದಾರೆ.
ಮನೆಯ ಮಾಲೀಕ ಚಿನ್ನದೊರೆ ಕಳೆದ 40 ವರ್ಷಗಳಿಂದ ತಮಿಳುನಾಡಿನಿಂದ ಬಂದು ನೆಲೆಸಿದ್ದಾರೆ. ಮಕ್ಕಳ ಮದುವೆಗಾಗಿ ಜಮೀನು ಮಾರಿ ನಗದು ಇಟ್ಟು, ಚಿನ್ನಾಭರಣ ಮಾಡಿಸಿದ್ದರು ಎನ್ನಲಾಗಿದ್ದು, ಸ್ಥಳಕ್ಕೆ ಹನೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.