ಗುಮ್ಮಳಾಪುರ, ಕೃಷ್ಣಗಿರಿ ಜಿಲ್ಲೆಯ ತಮಿಳುನಾಡು
ಹೇಮಭಾಗ್ಯ ರುಚಿಂ ಶಶಾಂಕ ಮುಕುಟಮ್
ಸಂಚಾಮ್ಯಕಸ್ರಗಯುತಾಮ್ ಹಸ್ತೇ ಮುದ್ಗರ ಪಾಶವಜ್ರಾಸನಾಂ ಸಂವೀಬೃತೀಂಭೂಷಣೇ
ವ್ಯಾಪ್ತಾಗೀಂ ಬಗಳಾಮುಖೀಂ ತ್ರಿಜಾಗತಾಂ ಸಂಸ್ಥಾಭಿನಿ ಚಿಂತಯೇತ್||
ಈ ಶ್ರೀ ಕ್ಷೇತ್ರವು ಗೌರಿ ದೇವಿಯ ಭೂ ಕೈಲಾಸ ಎಂದು ಪ್ರಸಿದ್ಧಿ ಪಡೆದಿದೆ ಪುರಾತನ ಕಾಲದಲ್ಲಿ ಸಾಕ್ಷಾತ್ ಪಾರ್ವತಿ ದೇವಿಯೆ ಇಲ್ಲಿ ಬಂದು ನೆಲೆಸಿದಂತಹ ಪುಣ್ಯಕ್ಷೇತ್ರವಾಗಿದೆ. ಒಬ್ಬ ಪುಟ್ಟ ಬಾಲಕ ಈ ಕ್ಷೇತ್ರಕ್ಕೆ ದೇವಿಯನ್ನು ನಿಜ ರೂಪದಲ್ಲಿ ಕರೆತಂದಿದ್ದಾನೆಂಬ ಪ್ರತೀತಿ ಇದೆ.
ಇಲ್ಲಿನ ಹಿರೇ ಮಠವು 1008ರ ಇಸವಿಯಲ್ಲಿ ಈ ಮಠವು ಸ್ಥಾಪನೆಗೊಂಡಿದೆ ಇಲ್ಲಿಯವರೆಗೆ 50 ರಿಂದ 60 ಶ್ರೀಗಳು ಆಗಿ ಹೋಗಿದ್ದಾರೆ ಈಗಿನ ಶ್ರೀಗಳು ಶ್ರೀ ಶ್ರೀ ಶ್ರೀ ಶಿವಾನಂದ ಶಿವಾಚಾರ್ಯರು.ಈ ಕ್ಷೇತ್ರದ ಇತಿಹಾಸವೆಂದರೆ 101 ಬಾವಿ,101 ಕೆರೆ 771 ಮಂದಿ ಶಿವಶರಣರು ವಾಸವಾಗಿದ್ದ ಜಾಗ.
ಈ ಶರಣರ ಸಂತತಿಯಲ್ಲಿ ಹುಟ್ಟಿರುವಂತಹ ಗುಮ್ಮಾಳಾಪುರದ ಗುಂಡು ಗೌರಮ್ಮನವರು. ಹಿಂದೆ ತಾಯಿ ಪಾರ್ವತಿ ದೇವಿಯು ಈ ಕ್ಷೇತ್ರಕ್ಕೆ ಬಂದು ನೆಲೆನಿಂತು ಹದಿನಾರು ದಿನಗಳು ಭಕ್ತಾದಿಗಳಿಂದ ಪೂಜೆ ಮಾಡಿಸಿಕೊಂಡು ಅವರ ಹರಕೆಯನ್ನು ಪೂರೈಸುತ್ತಾಳೆ ಎಂಬ ಪ್ರತೀತಿ ಇದೆ.ಹೀಗೆ ಕೈಲಾಸ ಬಿಟ್ಟು ಬಂದ ಪಾರ್ವತಿ ದೇವಿಯನ್ನು ಹುಡುಕಿಕೊಂಡು ಬಂದಂತಹ ಶ್ರೀ ಗಣೇಶ,ಜಯ ವಿಜಯರು, ನಂದಿ ಮತ್ತು ಶ್ರೀ ವೀರಭದ್ರಸ್ವಾಮಿ ಎಲ್ಲರೂ ತಾಯಿಗೆ ನಡೆಸುತ್ತಿದ್ದ ಪೂಜೆಗಳನ್ನು ನೋಡಿ ಅವರು ಇಲ್ಲಿಯೇ ಇದ್ದರಂತೆ.
. ಅವರೆಲ್ಲ ಬರದೇ ಇರುವುದನ್ನು ನೋಡಿ ಸಾಕ್ಷಾತ್ ಶಿವನೇ ಬಂದರೆಂದು ಪ್ರತೀತಿ ಇದೆ. ಹೀಗೆ ಬಂದು ಹೋಗುವಾಗ ಪಾರ್ವತಿ ದೇವಿಗೆ ತವರು ಮನೆ ಬಿಟ್ಟು ಹೋಗುವಷ್ಟು ಬೇಸರವಾಯಿತಂತೆ ಆ ಸಮಯದಲ್ಲಿ ದೇವಿಗೆ ಸಂಪ್ರಾದಾಯದಂತೆ ಮಡಲಕ್ಕಿ ಕೊಟ್ಟು ಬುತ್ತಿಯನ್ನು ಕೊಟ್ಟು ಕಳಿಸಿದರಂತೆ.
ಆ ಸಮಯದಲ್ಲಿ ಇದ್ದ ಮಠಾಧೀಶರ ಬಳಿ ಬಂದು ತಾಯಿಯು ಶೆಟ್ಟರ ಕೆರೆಯ ಮಣ್ಣಿನಿಂದ ಮೂರ್ತಿ ಮಾಡಿಸಿ ಕಟ್ಟೆಯಲ್ಲಿ ಇಟ್ಟು ಪೂಜಿಸಿ ಆ ನೀರನ್ನು ಪೋಕ್ಷಣೆ ಮಾಡಿದರೆ ನಾನು ಆ ಮೂರ್ತಿಯಲ್ಲಿ ಆವಾಹನೆ ಆಗುವೆನು ಎಂದು ತಿಳಿಸಿದರಂತೆ ಆಗ ಶ್ರೀಗಳು ಕೆರೆಯ ಮಣ್ಣನ್ನು ತಂದು ಶಿಲ್ಪಿಗಳಿಂದ ಸುಂದರವಾದ 64 ಇಂಚು ಇರುವ ಗೌರಿ ದೇವಿಯ ಮೂರ್ತಿಯನ್ನು ಮಾಡಿಸಿ ಅವಳಿಗೆ ಉಡುಗೆ — ತೂಡುಗೆ ಬಣ್ಣ ಎಲ್ಲಾ ರೀತಿಯ ಆಭರಣದಿಂದ ಅವಳನ್ನು ಸಿಂಗರಿಸಿ 64 ಮೊಳದ ಸೀರೆ 32 ಇಂಚು ಉದ್ದ ರೇಷ್ಮೆ ಸೀರೆ ಉಡಿಸಿ ಅವಳದೇ ಆದ 32 ಒಡವೆಗಳನ್ನು ತಾಯಿಯ ಮೇಲೆ ಹಾಕಿರುತ್ತಾರೆ.
ಗೌರಿಹಬ್ಬದ ಆದನಂತರ ಗೌರಿ ಜಾತ್ರಾ ಮಹೋತ್ಸವವು ಸುಮಾರು ನಾಲ್ಕು ದಿನಗಳ ಕಾಲ ನಡೆಯುತ್ತದೆ ಮೊದಲ ದಿನ ಬಸವನ ಜಾತ್ರೆ, ಎರಡನೆಯ ದಿನ ವೀರಭದ್ರನ ಅಗ್ನಿಕೊಂಡ ಮಹೋತ್ಸವ,ಮೂರನೇ ದಿನ ಸಮಸ್ತ ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವವನ್ನು ನಾಲ್ಕನೇಯ ದಿನ ಮಹಾಗಣಪತಿಯ ಸಹಿತವಾಗಿ ಗೌರಿ ದೇವಿಯ ಒಂದು ರಥೋತ್ಸವ,ಮತ್ತು ಊರು ಬಿದಿಗಳಲ್ಲಿ ಮೆರವಣಿಗೆ ನಡೆಸಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ .
ನಂತರ ಗೌರಿ ದೇವಿಯನ್ನು ಜಲದಲ್ಲಿ ವಿಸರ್ಜನೆ ಮಾಡುತ್ತಾರೆ. ಈ ರೀತಿ ಹಿಂದಿನಿಂದಲೂ ನಡೆದುಕೊಂಡುಬಂದ ಸಂಪ್ರದಾಯವಾಗಿದೆ.