ಮನೆ ಸುದ್ದಿ ಜಾಲ ಕೆರೆ ಕೋಡಿ ನುಂಗಿದವರನ್ನು ಖಾಲಿ ಮಾಡಿಸುತ್ತೇವೆ: ಹೆಚ್.ಡಿ.ಕುಮಾರಸ್ವಾಮಿ

ಕೆರೆ ಕೋಡಿ ನುಂಗಿದವರನ್ನು ಖಾಲಿ ಮಾಡಿಸುತ್ತೇವೆ: ಹೆಚ್.ಡಿ.ಕುಮಾರಸ್ವಾಮಿ

0

ಬೆಂಗಳೂರು (Bengaluru)- ಬಿಜೆಪಿ ನಾಯಕರಿಗೆ ದೊಡ್ಡ ಹುಲ್ಲುಗಾವಲು ಸಿಕ್ಕಿದೆ. ಚೆನ್ನಾಗಿ ಮೇಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ,ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.

ನಗರದ ಮಹಾಲಕ್ಷ್ಮೀ ಲೇಔಟ್ ನ ಕುರುಬರ ಹಳ್ಳಿಯಲ್ಲಿ ಇಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡಾ, ಸಿ , ರಾಜಣ್ಣ ನವರ ನೇತೃತ್ವದಲ್ಲಿ ನಡೆದ  ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೆರೆ-ಕೋಡಿಗಳನ್ನು ನುಂಗಿದವರನ್ನು ಖಾಲಿ ಮಾಡಿಸುತ್ತೇವೆ ಹಾಗೂ ಆ ಕೆರೆಗಳಿಗೆ ಪೂರ್ವ ವೈಭವ ತಂದು ನದಿ ಜಲವನ್ನು ತುಂಬಿಸುತ್ತೇವೆ ಎಂದು ಘೋಷಣೆ ಮಾಡಿದರು.

ನಾನು 25 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡದೇ ಇದ್ದಿದ್ದರೆ ಎಂಟು ಸಾವಿರ ಕೋಟಿ ರೂ. ಕಮಿಷನ್ ಸಿಗುತ್ತಿತ್ತು. ನಾನು ಬೆಂಗಳೂರಿನಲ್ಲಿ ಚರಂಡಿ ಕ್ಲೀನ್ ಮಾಡುವುದಕ್ಕೆ, ವೈಟ್ ಟ್ಯಾಪಿಂಗ್ ಮಾಡುವುದಕ್ಕೆ ಅದೇ ಹಣವನ್ನು ಕೊಟ್ಟು ಕಮಿಷನ್ ಪಡೆದಿದ್ದರೆ ಬಿಜೆಪಿ, ಕಾಂಗ್ರೆಸ್ ಗಿಂತ ಚೆನ್ನಾಗಿ ಚುನಾವಣೆ ಮಾಡಬಹುದಿತ್ತು. ನಮ್ಮ ಶಾಸಕರಿಗೆ ಆ ಹಣವನ್ನು ಹಂಚಿ ಕೊಳ್ಳೆ ಹೊಡೆಯಬಹುದಿತ್ತು. ಈಗ ಬಿಜೆಪಿಯವರು 40% ಕಮಿಷನ್ ಹೊಡೆಯುತ್ತಿದ್ದಾರೆ, ಅವರಿಗೆ ನಾಚಿಕೆ ಆಗಬೇಕು ಎಂದು ಹೇಳಿದರು.

ರಾಜ್ಯದ ನೀರಾವರಿ ಯೋಜನೆಗಳನ್ನು ಬದ್ಧತೆಯಿಂದ ಜಾರಿ ಮಾಡುವುದು ನಮ್ಮ ಗುರಿ. ನೆನೆಗುದಿಗೆ ಬಿದ್ದಿರುವ ಎಲ್ಲ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ. ದೇವೇಗೌಡರು ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ದೊಡ್ಡ ಕೊಡುಗೆ ನೀಡಿದ್ದಾರೆ. ಮೆಟ್ರೋ ರೈಲು, ಐಟಿಗೆ ಉತ್ತೇಜನ, 9 ಟಿಎಂಸಿ ಕುಡಿಯುವ ನೀರು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕೊಟ್ಟರು ಎಂದು ಹೇಳಿದರು.

ಸಚಿವ ಗೋಪಾಲಯ್ಯ ವಿರುದ್ಧ ಟೀಕಾಪ್ರಹಾರ:

ಈ ಕ್ಷೇತ್ರದಲ್ಲಿ ಒಬ್ಬ ಮಹಾನುಭಾವ ಇದ್ದ. ಆತನಿಗೆ ಎರಡು ಬಾರಿ ಟಿಕೆಟ್ ಕೊಟ್ಟೆ. ನನಗೆ ಟೋಪಿ ಹಾಕಿ ಹೋದ. ಸ್ವಾಮೀಜಿ ಒಬ್ಬರು, “ಅಂತ ಏನೋ ತಪ್ಪು ಮಾಡಿಕೊಂಡಿದ್ದಾನೆ, ಒಂದು ಬಾರಿ ಟಿಕೇಟ್ ಕೊಡಿ” ಎಂದರು. ಅವರ ಸಲಹೆ ಮೇರೆಗೆ ಟಿಕೆಟ್ ಕೊಟ್ಟೆ. ಆಮೇಲೆ ಸಾವಿರಾರು ಕೋಟಿ ರೂ. ಅನುದಾನ ಕೊಟ್ಟೆ ಈ ಕ್ಷೇತ್ರಕ್ಕೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ಅವರ ಹೆಸರು ಹೇಳದೆಯೇ ಟೀಕಾಪ್ರಪಾರ ನಡೆಸಿದರು.

ಅಬಕಾರಿ ಇಲಾಖೆಯಲ್ಲಿ ಟಾರ್ಗೆಟ್ ಹಾಕಿಕೊಂಡು ಲೂಟಿ ಮಾಡಲಾಗುತ್ತಿದೆ. ವೈನ್ ಸ್ಟೋರ್ʼಗಳಿಂದ ವಸೂಲಿ ಮಾಡಲಾಗುತ್ತಿದೆ. ಪಾಪದ ಹಣವನ್ನು ಲೂಟಿ ಮಾಡಿ ಮೆರೆಯುತ್ತಿದ್ದಾರೆ. ಅದೇ ಹಣವನ್ನು ಮುಂದಿನ ಚುನಾವಣೆಯಲ್ಲಿ ಮತದಾರರಿಗೆ ಹಂಚುತ್ತಾರೆ ಎಂದು ಅವರು ಆರೋಪಿಸಿದರು.