ಮನೆ ರಾಜಕೀಯ ಐಟಿ ಸಿಟಿಯ ಸ್ಥಿತಿ ಅಯ್ಯೋ ಎನ್ನುವಂತಿದೆ: ಹೆಚ್ ಡಿಕೆ ಟ್ವೀಕೆ

ಐಟಿ ಸಿಟಿಯ ಸ್ಥಿತಿ ಅಯ್ಯೋ ಎನ್ನುವಂತಿದೆ: ಹೆಚ್ ಡಿಕೆ ಟ್ವೀಕೆ

0

ಬೆಂಗಳೂರು(Bengaluru): ಪ್ರಧಾನಿಗಳಿಗಾಗಿ ಸಿದ್ಧಪಡಿಸಿದ ರಸ್ತೆಯೇ ಕುಸಿದುಬಿದ್ದಿದೆ. 40% ಕಮಿಷನ್‌ & ಕಳಪೆ ಕಾಮಗಾರಿಯ ಫಲಶ್ರುತಿ ಇದು. ದೇಶದ ಪ್ರಧಾನಿಯೇ ಸಂಚರಿಸಿದ ರಸ್ತೆಯೇ ಕಳಪೆ. ಬಿಜೆಪಿ ಅಭಿವೃದ್ಧಿ ಮಾದರಿ ಎಂದರೆ ಇದೇನಾ?. ಐಟಿ ಸಿಟಿಯ ಸ್ಥಿತಿ ಅಯ್ಯೋ ಎನ್ನುವಂತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ  ಕಿಡಿಕಾರಿದ್ದಾರೆ.

ಇಂದು ಟ್ವಿಟ್ಟರ್ ನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ನಗರದ ಜನರಿಗೆ ಸ್ಥಳೀಯವಾಗಿ ಅತ್ಯುತ್ತಮ ಆಡಳಿತ, ಸೇವೆಗಳು ಲಭ್ಯವಾಗಲಿ ಎಂದು ಪಾಲಿಕೆಯಾಗಿದ್ದನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ಮಾಡಿದೆ. ಆದರೆ, ಬಿಜೆಪಿ ಸರ್ಕಾರವು ಬಿಬಿಎಂಪಿ ರಚನೆಯ ಮೂಲ ಆಶಯವನ್ನೇ ಬುಡಮೇಲು ಮಾಡಿ ರಾಜಕೀಯ ಸ್ವಾರ್ಥ ಸಾಧನೆಯ ಷಡ್ಯಂತ್ರ ನಡೆಸಿದೆ  ಎಂದು ಆರೋಪಿಸಿದ್ದಾರೆ.

ಬಿಜೆಪಿ ಅಧಿಕಾರ ಪಿಪಾಸು. ಅನ್ಯಪಕ್ಷ ಅಧಿಕಾರದಲ್ಲಿರುವುದು ಆ ಪಕ್ಷಕ್ಕೆ ಅಪಥ್ಯ. ತನ್ನ ಕೆಟ್ಟ ಆಡಳಿತಕ್ಕೆ ಬೇಸತ್ತು ಬೆಂಗಳೂರಿಗರು ಬೇರೆ ಪಕ್ಷಕ್ಕೆ ಎಲ್ಲಿ ಮತ ಹಾಕಿಬಿಟ್ಟಾರೋ ಎನ್ನುವ ಭೀತಿಯಿಂದ ಚುನಾವಣೆಯನ್ನೇ ನಡೆಸಲಿಲ್ಲ. ಕೋರ್ಟ್‌ ಚಾಟಿ ಬೀಸಿದ ಮೇಲೆ ಚುನಾವಣೆ ಎನ್ನುತ್ತಿರುವ ಸರ್ಕಾರ, ಈಗ ವಾರ್ಡ್‌ ವಿಂಗಡಣೆಯ ನಾಟಕ ಆಡಿದೆ ಎಂದು ಟೀಕಿಸಿದ್ದಾರೆ.

`ಕೋರ್ಟ್‌ ಹೇಳಿದರಷ್ಟೇ ಕೆಲಸ’ ಎನ್ನುವ ಚಾಳಿ ಬಿಜೆಪಿ ಸರ್ಕಾರದ್ದು. ನ್ಯಾಯಾಲಯದ ಅದೇಶವನ್ನೇ ಧಿಕ್ಕರಿಸಿ ನಡೆದ ಈ ನಿರ್ಲಜ್ಜ ಸರ್ಕಾರಕ್ಕೆ ಜನಹಿತಕ್ಕಿಂತ ಪಕ್ಷಹಿತವೇ ಸರ್ವಸ್ವ. ವಾರ್ಡ್‌ ವಿಂಗಡಣೆ ಸ್ವರೂಪ ನೋಡಿದರೆ ಬಿಜೆಪಿಯ ‘ಅಧಿಕಾರದ ವಿಕೃತಿ’ ಯಾವ ಮಟ್ಟದಲ್ಲಿದೆ ಎನ್ನುವುದು ಅರ್ಥವಾಗುತ್ತದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಾರ್ಡ್ ವಿಂಗಡಣೆಯಲ್ಲಿ ಬೆಂಗಳೂರು ನಗರದ ಸಮಗ್ರತೆ, ಅನನ್ಯತೆಯನ್ನು ಕಡೆಗಣಿಸಲಾಗಿದೆ. ಬೆಂಗಳೂರು ಎಂದರೆ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳು ಮಾತ್ರವಲ್ಲ. ಇದು ಕೇವಲ ಬಿಜೆಪಿಯಿಂದ, ಬಿಜೆಪಿ ಶಾಸಕರಿಗಾಗಿ, ಬಿಜೆಪಿಯೇ ಮಾಡಿಕೊಂಡ ಮರು ವಿಂಗಡಣೆ. ಐತಿಹಾಸಿಕ ವಾರ್ಡ್​​ಗಳ ಹೆಸರುಗಳನ್ನು ಬದಲಿಸಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಚರಿತ್ರೆಯ ಕುರುಹುಗಳನ್ನು ಅಳಿಸಿ ಹಾಕಿ, ಪಠ್ಯಕ್ಕೆ ಅಪಚಾರ ಎಸಗಿದಂತೆ ನಾಡಪ್ರಭುಗಳು ಮತ್ತು ಮೈಸೂರು ಒಡೆಯರ ಘನ ಕೀರ್ತಿಗೆ ಚ್ಯುತಿ ತರುವ ಹುನ್ನಾರ ಎಂದು ದೂರಿದ್ದಾರೆ.

ಬೆಂಗಳೂರು ಮಹಾನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗಬೇಕು ಎಂದರೆ ರಾಷ್ಟ್ರಪತಿಗಳು ಮತ್ತು ಪ್ರಧಾನಿ ಆಗಾಗ್ಗೆ ನಗರಕ್ಕೆ ಭೇಟಿ ನೀಡುತ್ತಿರಬೇಕೇ ಎಂದು ಹೈಕೋರ್ಟ್‌ ಛೀಮಾರಿ ಹಾಕಿದೆ. ನಗರದ ಜನರ ಬವಣೆಗೆ ಹಿಡಿದ ಕನ್ನಡಿ ಇದು. ಮೊನ್ನೆಯಷ್ಟೇ ಪ್ರಧಾನಿ ಬಂದು ಹೋಗಿದ್ದಾರೆ.

ಅದಕ್ಕಾಗಿ 23 ಕೋಟಿ ಖರ್ಚು ಮಾಡಿ ನಗರದ ರಸ್ತೆ ಗುಂಡಿ ಮುಚ್ಚಲಾಗಿದೆ. ಇದನ್ನು ಗಮನಿಸಿದರೆ ಪ್ರಧಾನಿ ನಗರದ ಬೇರೆ ಬೇರೆ ಮಾರ್ಗಗಳಲ್ಲಿ ಆಗಾಗ ಸಂಚರಿಸಬೇಕು. ಆಗ ಅವರನ್ನು ಮೆಚ್ಚಿಸುವ ಸಲುವಾಗಿಯಾದರೂ ಅಧಿಕಾರಿಗಳು ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಬಹುದು ಎಂದು ಕೋರ್ಟ್ ಚಾಟಿ ಬೀಸಿದೆ. ಇನ್ನು, ಪ್ರಧಾನಿಗಳಿಗಾಗಿ ಸಿದ್ಧಪಡಿಸಿದ ರಸ್ತೆಯೇ ಕುಸಿದುಬಿದ್ದಿದೆ. ಬಿಜೆಪಿ ಅಭಿವೃದ್ಧಿ ಮಾದರಿ ಎಂದರೆ ಇದೇನಾ  ಎಂದು ಹೆಚ್​​ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಹಿಂದಿನ ಲೇಖನಮಡಿಕೇರಿಯಲ್ಲಿ ಭೂಮಿ ಕಂಪಿಸಿದ ಅನುಭವ
ಮುಂದಿನ ಲೇಖನಗರ್ಭಪಾತದ ಹಕ್ಕು ರದ್ದುಗೊಳಿಸಿದ ಅಮೇರಿಕ