ಹುಣಸೂರು: 47ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಮರದೂರು-2 ಏತ ನೀರಾವರಿ ಯೋಜನೆ ಅನುಷ್ಟಾನಕ್ಕೆ ಸರಕಾರದ ತಾತ್ಕಾಲಿಕ ತಡೆಯನ್ನು ತೆರವುಗೊಳಿಸಿ, ಯೋಜನೆ ಇಲಾಖಾ ಮುಖ್ಯಸ್ಥರಿಗೆ ನಿರ್ದೇಶಿಸಬೇಕೆಂದು ಉಪಮುಖ್ಯಮಂತ್ರಿಯಾದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ರಿಗೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮನವಿ ಸಲ್ಲಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಭೇಟಿ ಮಾಡಿದ ಮಾಜಿ ಶಾಸಕ ಮಂಜುನಾಥರು ಹುಣಸೂರು ತಾಲೂಕಿನ ಮರದೂರು ಬಳಿಯ ಲಕ್ಷ್ಮಣತೀರ್ಥ ನದಿಯಿಂದ ಬಿಳಿಕೆರೆ ಹೋಬಳಿಯ 47 ಕೆರೆಗಳಿಗೆ ೮೫ಕೋಟಿ ವೆಚ್ಚದಡಿ ಏತನೀರಾವರಿ ಮುಖಾಂತರ ನೀರು ತುಂಬಿಸುವ ಯೋಜನೆಗೆ ಈ ಹಿಂದೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಕಾಮಗಾರಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ.
ಆದರೆ ಸರ್ಕಾರ ಕಾಮಗಾರಿಗಳಿಗೆ ತಡೆಹಿಡಿಯುವಂತೆ ಸರ್ಕಾರ ಆದೇಶಿಸಿರುವ ಹಿನ್ನಲೆಯಲ್ಲಿ ಮರದೂರು ಏತ ನೀರಾವರಿ ಯೋಜನೆಯ ಅನುಷ್ಟಾನ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿರುತ್ತದೆ. ಈ ಯೋಜನೆಯಿಂದ ಅನುಕೂಲವಾಗುವ 70 ಕ್ಕೂ ಹೆಚ್ಚು ಹಳ್ಳಿಗಳು ಮಳೆ ಆಶ್ರಿತ ಪ್ರದೇಶವಾಗಿದ್ದು, ಇಲ್ಲಿನ ಜನ ಜಾನುವಾರುಗಳಿಗೆ ಕುಡಿಯಲು ನೀರಿಗಾಗಿ ಮತ್ತು ಅಂತರ್ಜಲ ಮಟ್ಟದ ಸುಧಾರಣೆಗೆ ಅನುಕೂಲವಾಗಲಿದೆ.
ಯೋಜನೆಯ ಅನುಮೋದನೆಗಾಗಿ ನಾನು ಕಳೆದ ಹತ್ತು ವರ್ಷಗಳಿಂದ ಪ್ರಯತ್ನಿಸಿದ್ದೇನೆ. ಈ ಹಿಂದೆ ಟೆಂಡರ್ ಪ್ರಕ್ರಿಯೆ ಸಹ ನಡೆದಿತ್ತು. ಈಗ ನಮ್ಮದೇ ಸರಕಾರವಿದ್ದು, ತಾಲೂಕಿನ ರೈತರ ಹಿತದೃಷ್ಟಿಯಿಂದ ಯೋಜನೆಗೆ ಚಾಲನೆ ನೀಡುವಂತೆ ಮನವಿ ಮಾಡಿದ್ದೇನೆಂದು ಮಂಜುನಾಥ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.