ಹಲಾಸನದಲ್ಲಿ ಶೀರ್ಷಬದ್ಧಹಸ್ತ ಹಲಾಸನ, ವಿಸ್ತೃತಪಾದ ಹಲಾಸನ, ಪಾರ್ಶ್ವ ಹಲಾಸನ ಮತ್ತು ಸುಪ್ತಕೋಣಾಸನ ಎಂಬ ಪ್ರಭೇದಗಳು ಇವೆ. ‘ಹಲ’ ಎಂದರೆ ಸಂಸ್ಕೃತದಲ್ಲಿ ನೇಗಿಲು ಎಂದರ್ಥ.
ಮಾಡುವ ಕ್ರಮ
ಮೊದಲು ನೆಲದ ಮೇಲೆ ನೇರವಾಗಿ, ಅಂಗಾತನಾಗಿ ಮಲಗಿಕೊಳ್ಳಬೇಕು.
ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಾ ಎರಡೂ ಕಾಲುಗಳನ್ನೂ ಉತ್ಥಿತ ಪಾದಾಸನದಂತೆ ನೆಲದಿಂದ ಮೇಲಕ್ಕೆ ಎತ್ತಬೇಕು.
ಎರಡೂ ಕೈಗಳಿಂದ ಬೆನ್ನಿಗೆ ಭದ್ರವಾದ ಆಧಾರವನ್ನು ಕೊಟ್ಟು ಸರ್ವಾಂಗಾಸನದಂತೆ ಕಾಲುಗಳನ್ನು ಮೇಲೆತ್ತಿ ಭೂಮಿಗೆ ಲಂಬವಾಗಿ ನಿಲ್ಲಿಸಬೇಕು.
ಈ ಸ್ಥಿತಿಯಲ್ಲಿ ನಿಧಾನವಾಗಿ ಉಸಿರಾಡಿ ಅನಂತರ ಚಿತ್ರದಲ್ಲಿ ತೋರಿಸುವಂತೆ ಕಾಲುಗಳನ್ನು ನೆಲಕ್ಕೆ ಮುಟ್ಟಿಸಬೇಕು.
ಅನಂತರ ಕೈಗಳನ್ನು ಕಾಲುಗಳಿಗೆ ವಿರುದ್ಧ ದಿಕ್ಕಿನಲ್ಲಿ ಚಾಚಬೇಕು. ಈ ಸ್ಥಿತಿಯಲ್ಲಿ ಸಮತೋಲನ ಪಡೆದ ನಂತರವೇ ಹಲಾಸನದ ಇತರ ಪ್ರಭೇದಗಳನ್ನು ಮಾಡಬಹುದು.
ಲಾಭಗಳು
ಹಲಾಸನದ ಅಭ್ಯಾಸದಿಂದ ಜಠರ, ಕರುಳು, ಪಿತ್ತಜನಕಾಂಗ ಮುಂತಾದ ಅಂಗಗಳು ಹೆಚ್ಚು ಬಲಗೊಳ್ಳುವುವು. ಮಲಬದ್ಧತೆ ನಿವಾರಣೆಯಾಗುವುದು. ಹೊಟ್ಟೆಯ ಬೊಜ್ಜು ಕರಗುವುದು. ಕುತ್ತಿಗೆ ಮತ್ತು ಕಾಲುಗಳಲ್ಲಿನ ದೋಷಗಳು ದೂರವಾಗುವುವು. ಈ ಆಸನವು ವಿಶೇಷವಾಗಿ ಬೆನ್ನನೋವು ಮತ್ತು ಸಂಧಿವಾತ ಪರಿಹಾರಕ್ಕೆ ಹೆಚ್ಚು ಉಪಕಾರಿ.