ಮನೆ ರಾಜ್ಯ ಹಂಪಿ: ಸಿಲಿಂಡರ್ ಸ್ಪೋಟ – ಹೊತ್ತಿ ಉರಿದ ಹೋಟೆಲ್

ಹಂಪಿ: ಸಿಲಿಂಡರ್ ಸ್ಪೋಟ – ಹೊತ್ತಿ ಉರಿದ ಹೋಟೆಲ್

0

ಹೊಸಪೇಟೆ (ವಿಜಯನಗರ): ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಮಗ್ಗುಲಲ್ಲಿರುವ ‘ಮ್ಯಾಂಗೋ ಟ್ರೀ’ ಹೋಟೆಲ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಇಡೀ ಹೋಟೆಲ್‌ ಧಗಧಗನೆ ಹೊತ್ತಿ ಉರಿದಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ರಾತ್ರಿ ವೇಳೆ ಈ ಅಗ್ನಿ ಅವಘಡದಲ್ಲಿ  ಸಂಭವಿಸಿರುವುದರಿಂದ ಯಾವುದೇ ಸಾವು ನೋವು ಉಂಟಾಗಿಲ್ಲ.  ಹೋಟೆಲ್ ಪಕ್ಕದ ಬಟ್ಟೆ ಮಳಿಗೆ, ಶೆಡ್ ಕೂಡ ಬೆಂಕಿ ಜ್ವಾಲೆಗೆ ಸುಟ್ಟು ಹೋಗಿವೆ. ಸ್ಫೋಟದಿಂದ ಸ್ಮಾರಕಗಳಿಗೆ ಯಾವುದೇ ಧಕ್ಕೆ‌ ಉಂಟಾಗಿಲ್ಲ.

ಹೋಟೆಲ್‌ನಲ್ಲಿ ಶಾಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಸ್ಫೋಟವಾಗಿರುವ ಸಾಧ್ಯತೆ ಇದೆ. ಏಳರಿಂದ ಎಂಟು ಸಿಲಿಂಡರ್‌ಗಳನ್ನು ಹೋಟೆಲ್‌ನಲ್ಲಿ ಇಡಲಾಗಿತ್ತು. ಅಗ್ನಿಶಾಮಕ ದಳದವರು ಸಕಾಲಕ್ಕೆ ಬಂದು ಬೆಂಕಿ‌ ನಂದಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ‌ ಎಂದು ಪೊಲೀಸರು ತಿಳಿಸಿದ್ದಾರೆ.

‘ಮ್ಯಾಂಗೋ ಟ್ರೀ’ ಹೋಟೆಲ್ ಹಂಪಿಯಲ್ಲಿ ಬಹಳ ಪ್ರಸಿದ್ಧವಾಗಿದ್ದು, ದೇಶ-ವಿದೇಶದ ಜನ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುತ್ತಾರೆ. ಮೇಲಿಂದ ವಿರೂಪಾಕ್ಷ ದೇವಸ್ಥಾನಕ್ಕೆ ಹೊಂದಿಕೊಂಡಿದ್ದು, ಜನರಿಗೆ ಅನುಕೂಲವಾಗಿದೆ.

ಹೋಟೆಲ್ ಇರುವ ಪ್ರದೇಶ ಜನತಾ ಕಾಲೊನಿಯಂದೆ ಗುರುತಿಸಿಕೊಂಡಿದ್ದು, ಇದು ವಾಣಿಜ್ಯ ಚಟುವಟಿಕೆಗಳಿಗೆ ಹೆಸರಾಗಿದೆ. ಇಲ್ಲಿರುವ ಮಳಿಗೆಗಳನ್ನು ಸ್ಥಳಾಂತರಿಸಲು ಹಂಪಿ ಪ್ರಾಧಿಕಾರ ಮುಂದಾಗಿದ್ದು, ಕೋರ್ಟ್ ನಲ್ಲಿ ವ್ಯಾಜ್ಯ ನಡೆಯುತ್ತಿದೆ.