ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ಹರಿದು ಆಕ್ರೋಶ; ಲಘುಲಾಠಿ ಪ್ರಹಾರ
ಮಂಡ್ಯ: ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಮಾಡಿರುವುದನ್ನು ಖಂಡಿಸಿ ಬಿಜೆಪಿ, ಜೆಡಿಎಸ್ ಭಜರಂಗದಳ,ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸೋಮವಾರ ಕೆರಗೋಡು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ಕೆರಗೋಡು ಗ್ರಾಮದ ಜನರ ಜೊತೆಗೂಡಿ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಮತ್ತು ಜಾತ್ಯಾತೀತ ಜನತಾದಳ ಪಕ್ಷದ ಕಾರ್ಯಕರ್ತರು ಜೈ ಶ್ರೀ ರಾಮ್, ಜೈ ಹನುಮಾನ್ ಘೋಷಣೆಯೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಸೋಮವಾರ ಬೆಳಗ್ಗೆ ಕೆರಗೋಡು ಗ್ರಾಮದ ಹನುಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಗೊಂಡಿತು,ಶ್ರೀ ರಾಮನ ಭಾವಚಿತ್ರ ಹಿಡಿದು ಹೆಗಲ ಮೇಲೆ ಕೇಸರಿ ಶಾಲು ಹಾಕಿಕೊಂಡು, ಕೇಸರಿ ಬಾವುಟಗಳನ್ನು ಹಿಡಿದು ಹೊರಟು ಹನುಮ ಧ್ವಜ ಕೆಳಕ್ಕೆ ಇಳಿಸಿದ ಜಿಲ್ಲಾಡಳಿತ,ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು,
15 ಕಿ.ಮೀ ಪಾದಯಾತ್ರೆ ಕೈಗೊಂಡಿರುವ ಸಾವಿರಾರು ಕಾರ್ಯಕರ್ತರು ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತಿದ್ದಾರೆ.
ಮಂಡ್ಯ ಶಾಸಕ ಗಣಿಗ ರವಿಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡರಾದ ಸಿ.ಟಿ.ರವಿ, ಕೆ.ಸಿ.ನಾರಾಯಣಗೌಡ, ಪ್ರೀತಂ ಗೌಡ, ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ, ಡಾ.ಇಂದ್ರೇಶ್ ಜೆಡಿಎಸ್ ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಸಿ. ಎಸ್. ಪುಟ್ಟರಾಜು, ಡಿ.ಸಿ.ತಮ್ಮಣ್ಣ ಸುರೇಶ್ ಗೌಡ, ಡಾ.ಕೆ.ಅನ್ನದಾನಿ, ಮನ್ ಮುಲ್ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರು, ಮನ್ ಮುಲ್ ಉಪಾಧ್ಯಕ್ಷ ಎಂ.ಎಸ್. ರಘುನಂದನ್, ಬಿಜೆಪಿ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್, ಡಾ.ಸಿದ್ದರಾಮಯ್ಯ, ಲಕ್ಷ್ಮಿ ಅಶ್ವಿನ್, ಅಶೋಕ್ ಜಯರಾಮ್,ಚಂದಗಾಲು ಶಿವಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.
ಮಾರ್ಗದುದ್ದಕ್ಕೂ ಹಳ್ಳಿಗಳ ಜನರು ಕಾರ್ಯಕರ್ತರಿಗೆ ಹಾರ ಹಾಕಿ ಸ್ವಾಗತ ಕೋರುತ್ತಿದ್ದಾರೆ. ಮಜ್ಜಿಗೆ, ಪಾನಕ ವಿತರಣೆ ಮಾಡುತ್ತಿದ್ದಾರೆ. ಅಲ್ಲಲ್ಲಿ ಶ್ರೀರಾಮನ ಫೋಟೊ ಇಟ್ಟು ಪೂಜೆ ಸಲ್ಲಿಸಿದರು.
ಪಾದಯಾತ್ರೆ ಮಂಡ್ಯ ನಗರದ ಪ್ರವೇಶ ಮಾಡಿದಾಗ ಕಾರಿಮನೆ ಗೇಟ್ ನಲ್ಲಿ ಪಾದಯಾತ್ರಿಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಲಾಯಿತು,ಕಾಳಿಕಾಂಬ ದೇವಾಲಯದ ಬಳಿ ನೆರೆದಿದ್ದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಜೊತೆಯಾಗಿ ಪಾದಯಾತ್ರೆಯಲ್ಲಿ ಸಾಗಿದರು,ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಕೆರಗೋಡು ಗ್ರಾಮದ ಧ್ವಜಸ್ತಂಬದಲ್ಲಿ ಹನುಮಾನ್ ಧ್ವಜ ಹಾರಿಸಬೇಕು ಎಂದು ಒತ್ತಾಯಿಸಿದರು.
ನಗರದ ಹೆದ್ದಾರಿಯಲ್ಲಿ ಅಳವಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಚಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ ಅವರಿದ್ದ ಫಲಪುಷ್ಪ ಪ್ರದರ್ಶನದ ಫ್ಲೆಕ್ಸ್, ಹಾಗು ನಟ ಚಿಕ್ಕಣ್ಣ ನಟನೆಯ ಉಪಾಧ್ಯಕ್ಷ ಸಿನಿಮಾದ ಫ್ಲೆಕ್ಸ್ ನ್ನು ಕಿತ್ತುಹಾಕಿದರು.
ಮಹಡಿ ಮೇಲೆ ಅಳವಡಿಸಿದ್ದ ಶಾಸಕ ರವಿಕುಮಾರ್ ಗಣಿಗ ಅವರ ಪ್ಲೆಕ್ಸ್ಗೆ ಕಲ್ಲು ಹೊಡೆದ ಕಲ್ಲು ಪಾದಯಾತ್ರೆ ತಲೆಗೆ ಬಿದ್ದು ತೀವ್ರ ಗಾಯಗೊಂಡರು.ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಪರಿಣಾಮ ಸ್ವಲ್ಪಸಮಯ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಎಚ್ಚೆತ್ತುಕೊಂಡ ಪೊಲೀಸರು ಲಾಠಿ ರುಚಿ ತೋರಿಸಿದರು.
ಫ್ಲೆಕ್ಸ್ಗೆ ತೂರಿದ ಕಲ್ಲು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರ ತಲೆಗೆ ಬಡಿದು ಗಾಯಗೊಂಡರು.ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸ್ ಕೊಡಿಸಲಾಯಿತು.ನಂತರ, ಪಾದಯಾತ್ರೆ ಜಿಲ್ಲಾಧಿಕಾರಿ ಬಳಿ ತಲುಪಿ ಪ್ರತಿಭಟನಾ ಧರಣಿ ನಡೆಸಲಾಯಿತು.
ದಾರಿಯುದ್ದಕ್ಕೂ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.














