ಮಡಿಕೇರಿ(Madikeri): ತಾಲ್ಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಇಂದು(ಶನಿವಾರ) ಬೆಳಿಗ್ಗೆಯಿಂದ ಎಲ್ಲಾ 4 ಕ್ರೆಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ಸುಮಾರು 10 ಸಾವಿರ ಕ್ಯುಸೆಕ್ ನೀರು ಬಿಡಲಾಗುತ್ತಿದೆ.
ಜಲಾಶಯದ ಗರಿಷ್ಠಮಟ್ಟ 2,859 ಅಡಿ ಇದ್ದು, ಶನಿವಾರ 2,856.53 ಅಡಿ ಇತ್ತು. ಜಲಾಶಯಕ್ಕೆ 4,321 ಕ್ಯುಸೆಕ್ ಒಳಹರಿವು ಇತ್ತು. ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಶನಿವಾರ ಜಲಾಶಯಕ್ಕೆ ಬಾಗಿನ ಸಲ್ಲಿಸಿದ್ದಾರೆ.
ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಐ.ಕೆ.ಪುಟ್ಟಸ್ವಾಮಿ ಮಾತನಾಡಿ, ಜಲಾಶಯದ ಭದ್ರತೆ ದೃಷ್ಟಿಯಿಂದ ನೀರಿನ ಮಟ್ಟವನ್ನು 2,857 ಅಡಿಗಳಿಗೆ ಕಾಯ್ದಿರಿಸಿ ನೀರು ಹರಿಸಲಾಗುತ್ತಿದೆ. ನದಿಪಾತ್ರದ ಜನರ ಸುರಕ್ಷತೆ ದೃಷ್ಟಿಯಿಂದ ಮೊದಲ ಹಂತವಾಗಿ 10 ಸಾವಿರ ಕ್ಯುಸೆಕ್ ನೀರನ್ನು ಮಾತ್ರ ನದಿಗೆ ಹರಿಬಿಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹಾಗೂ ಒಳಹರಿವಿನ ಪ್ರಮಾಣ ಆಧರಿಸಿ ನೀರು ಬೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಿ: ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡಿರುವುದರಿಂದ ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಮೀನುಗಾರರು ಹಾಗೂ ರೈತರು ತಮ್ಮ ಜಾನುವಾರುಗಳನ್ನು ನದಿಗೆ ಇಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹೇಂದ್ರ ಕುಮಾರ್ ಮನವಿ ಮಾಡಿದ್ದಾರೆ.