ಮನೆ ಅಪರಾಧ ಒಂದು ಲಕ್ಷ ರೂ.ನೀಡದ ಕಾರಣಕ್ಕೆ ಅಬಕಾರಿ ಅಧಿಕಾರಿಗಳಿಂದ ಸುಳ್ಳು ಮೊಕದ್ದಮೆ ದಾಖಲು: ಸಿಸಿಟಿವಿ ಕ್ಯಾಮರಾದಲ್ಲಿ ಸತ್ಯ...

ಒಂದು ಲಕ್ಷ ರೂ.ನೀಡದ ಕಾರಣಕ್ಕೆ ಅಬಕಾರಿ ಅಧಿಕಾರಿಗಳಿಂದ ಸುಳ್ಳು ಮೊಕದ್ದಮೆ ದಾಖಲು: ಸಿಸಿಟಿವಿ ಕ್ಯಾಮರಾದಲ್ಲಿ ಸತ್ಯ ಬಯಲು

0

ಮೈಸೂರು(Mysuru): ಒಂದು ಲಕ್ಷ ರೂ  ನೀಡಲಿಲ್ಲವೆಂಬ ಕಾರಣಕ್ಕೆ ಪವನ್ ಎಂಬುವವರ  ಮೇಲೆ ಮದ್ಯ ಮಾರಾಟ ಮಾಡುತ್ತಿದ್ದರು, ಪೊಲೀಸ್ ಇಲಾಖೆ ವಾಹನ ನೋಡಿ ಓಡಿಹೋದರು ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಜೂ. 15 ರ ರಜೆ ದಿನದಂದು ಸ್ವಂತ ಕಾರಿನಲ್ಲಿ ತಮ್ಮ ಮಾಮೂಲಿ ಬಟ್ಟೆಯಲ್ಲಿ ಮದ್ಯಪಾನ ಖರೀದಿಗೆ ಆಗಮಿಸಿದ್ದ ಪವನ್ ಎಂಬುವವರನ್ನು ತಡೆದ ಅಬಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳು ಪವನ್  ಅವರು ಒಂದು ಲಕ್ಷ ರೂ. ನೀಡಲಿಲ್ಲವೆಂಬ ಕಾರಣಕ್ಕೆ ಮದ್ಯ ಮಾರಾಟ ಮಾಡುತ್ತಿದ್ದರು, ಇಲಾಖಾ ವಾಹನ ಮತ್ತು ಸಮವಸ್ತ್ರ ಧರಿಸಿದ್ದ ನಮ್ಮನ್ನು ನೋಡಿ, ಕಾರಿನಿಂದ ಓಡಿ ಹೋದರು ಎಂಬಂತೆ ಸುಳ್ಳು ಮೊಕದ್ದಮೆ ದಾಖಲು ಮಾಡಿದ್ದಾರೆ.  

ಆದರೆ ಕಪ್ಪು ಬಣ್ಣದ ಕಾರಿನಲ್ಲಿ ಅಬಕಾರಿ ಅಧಿಕಾರಿ ಬರುವುದು, ಪವನ್ ಜೊತೆಯಲ್ಲೇ ಓಡಾಡುವುದು, ಅಬಕಾರಿ ನಿರೀಕ್ಷಕ ಸಂತೋಷ್ “ಡೀಲಿಂಗ್” ಮಾತಕತೆ ನಡೆಸುವುದು, ಪವನ್ ಕಾರಿನಲ್ಲಿಯೇ ಹೋಗುವುದು ಅಲ್ಲಿಯೇ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಚಿತ್ರೀಕರಣವಾಗಿದೆ. ಆದರೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಖಲಿಸಿರುವ  ಪ್ರಥಮ ವರ್ತಮಾನ ವರದಿ (ಎಫ್ ಐಆರ್) ಯಲ್ಲಿ ಘಟನೆ ಬಗ್ಗೆ ತದ್ವಿರುದ್ದ ಮಾಹಿತಿ ಇದೆ. ಈ ಘಟನೆ ಕೆಲವು ಸರ್ಕಾರಿ ಅಧಿಕಾರಿಗಳ ಹಗಲು ದರೋಡೆಗೆ ಹಿಡಿದ ಕನ್ನಡಿಯಾಗಿದೆ.

ಸಿಸಿಟಿವಿ ವಿಡಿಯೋ

ಎಫ್ ಐಆರ್ ನಲ್ಲಿರುವುದೇನು ?

ಜೂ. 15 ರಂದು ಸಂಜೆ 6.30 ಗಂಟೆಗೆ ಸಮಯದಲ್ಲಿ ವಿಧಾನ ಪರಿಷತ್ತಿನ ದಕ್ಷಿಣ ಪದವೀದರ ಕ್ಷೇತ್ರದ ಚುನಾವಣೆ ಮತ ಎಣಿಕೆ ಸಂಬಂಧ  ಜಿಲ್ಲಾಧಿಕಾರಿಗಳು ಒಣ ದಿನ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಂತೆ ಮೈಸೂರು ನಗರ ಗಸ್ತು ನಡೆಸುತ್ತಿದ್ದ ಸಮಯದಲ್ಲಿ ಬಾತ್ಮೀದಾರರಿಂದ ನಗರದ ಬನ್ನೂರು ರಿಂಗ್ ರಸ್ತೆ, ದೇವೇಗೌಡ ಸರ್ಕಲ್‌, ಆಲನಹಳ್ಳಿ ಬಳಿಯ ರಿಂಗ್ ರಸ್ತೆಗೆ ಹೊಂದಿಕೊಂಡಂತೆ ಇರುವ ಸರ್ವಿನ್ ರಸ್ತೆ, 17ನೇ ಮೇನ್ ಶ್ರೀನಿಧಿ ಕನ್ವೆಷನ್ ಹಾಲ್ ರಸ್ತೆಯಲ್ಲಿ ಟೀ ಅಂಗಡಿ ಬಳಿ ಓಮಿನಿ ವಾಹನದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಆಧಾರದ ಮೇಲೆ ಸದರಿ ಮೇಲ್ಕಂಡ ಸ್ಥಳಕ್ಕೆ 7.20 ಗಂಟೆ ಸಮಯಕ್ಕೆ ತೆರಳಲಾಗಿತ್ತು.ದೂರದಿಂದಲೇ ಇಲಾಖಾ ವಾಹನ ಹಾಗೂ ಸಮವಸ್ತ್ರಧಾರಿಗಳಾದ ನಮ್ಮಗಳನ್ನು ನೋಡಿದ ವಾಹನ ಚಾಲಕ ಕಾರನ್ನು ಬಿಟ್ಟು ಓಡಲು ಪ್ರಾರಂಭಿಸಿದ್ದು, ಆತನನ್ನು ಹಿಡಿಯಲು ನಾನು ಮತ್ತು ಸಿಬ್ಬಂದಿಗಳು ಪ್ರಯತ್ನಿಸಲಾಗಿ ಆತ ಸಿಗದೆ ತಪ್ಪಿಸಿಕೊಂಡು ಓಡಿ ಹೋದನು.

ನಂತರ ಚಾಲಕನು ಬಿಟ್ಟು ಹೋದ ಗ್ರೇ ಬಣ್ಣದ ಓಮಿನಿಬಳಿ ಬಂದು ಪರಿಶೀಲಿಸಲಾಗಿ ಕಾರಿನ ಸಂಖ್ಯೆ ಕೆ.ಎಲ್.-55-ಎಂ-2997 ನಂಬರಿನ ಮಾರುತಿ ಓಮಿನಿ ವಾಹನದಲ್ಲಿ 180 ಮಿಲಿಯ OMR 6 ಟೆಟ್ರಾಪ್ಯಾಕ್ ಗಳು, 180 ಮಿಲಿಯ 8PM ವಿಸ್ಮಯ 14 ಟೆಟ್ರಾಪ್ಯಾಕ್ ಗಳು, 180 ಮಿಲಿಯ M C Rum ನ 9 ಟೆಟ್ರಾಪ್ಯಾಕ್ ಗಳು, 180 ಮಿಲಿಯ OAB ಯ 12 ಟೆಟ್ರಾಪ್ಯಾಕ್ ಗಳು, 180 ಮಿಲಿಯ MCB ಯ 10 ಟೆಟ್ರಾಪ್ಯಾಕ್ ಗಳು ಹಾಗೂ 90 ಮಿಲಿಯ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿಯ 22 ಟೆಟ್ರಾಪ್ಯಾಕ್ ಗಳು ಒಟ್ಟು 11.160 ಲೀಟರ್ ಮದ್ಯ ಇರುವುದು ಕಂಡುಬಂದಿರುತ್ತದೆ. ಆರೋಪಿಯು ನಾಪತ್ತೆಯಾಗಿರುತ್ತಾನೆ.  ಆರೋಪಿಯು ಅಕ್ರಮವಾಗಿ ಮದ್ಯವನ್ನು ಹೊಂದಿ, ಸಾಗಾಣಿಕೆ ಮಾಡುತ್ತಿದ್ದುದ್ದು ಕಂಡುಬಂದಿದ್ದು, ಇದು ಕರ್ನಾಟಕ ಅಬಕಾರಿ ಕಾಯಿದೆ 1965 ರ ಕಲಂ 11, 14, ರ ಉಲ್ಲಂಘನೆಯಾಗಿದ್ದು, ಸದರಿ ಕಾಯಿದೆಯ ಕಲಂ 32 ಮತ್ತು 38(A) ರ ರೀತ್ಯಾ ಶಿಕ್ಷಾರ್ಹ ಅಪರಾಧವಾಗಿರುವುದರಿಂದ ದೊರೆತ ಮದ್ಯವನ್ನು ಮತ್ತು ವಾಹನವನ್ನು ಇಲಾಖಾ ವಶಕ್ಕೆ ತೆಗೆದುಕೊಂಡು, ನಾಪತ್ತೆಯಾದ ಆರೋಪಿಯ ವಿರುದ್ಧ ಮೊಕದ್ದಮೆಯನ್ನು ದಾಖಲಿಸಿ, ಪ್ರಥಮ ವರ್ತಮಾನ ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಘಟನೆಯನ್ನು ಮೇಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಿ, ಸತ್ಯವನ್ನು ಬಯಲಿಗೆಳೆಯಬೇಕಾಗಿದೆ.

ಹಿಂದಿನ ಲೇಖನಹಾರಂಗಿ ಜಲಾಶಯ ಭರ್ತಿ: ನದಿಗೆ 10 ಸಾವಿರ ಕ್ಯುಸೆಕ್ ನೀರು
ಮುಂದಿನ ಲೇಖನಮತ್ತೂರು ಒಂಟಿಸಲಗ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲ