ಮನೆ ದೇವಸ್ಥಾನ ಇಂದಿನಿಂದ ಹಾಸನಾಂಬ ದೇವಿ, ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಇಂದಿನಿಂದ ಹಾಸನಾಂಬ ದೇವಿ, ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

0

ಹಾಸನ: ಹಾಸನಾಂಬ ದೇವಿ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನವೆಂಬರ್ 2ರಿಂದ 15ವರೆಗೆ ನಡೆಯಲಿದ್ದು, ಹಾಸನಾಂಬ ದೇವಿ ಗರ್ಭಗುಡಿಯ ಬಾಗಿಲನ್ನು ನವೆಂಬರ್ 2ರಂದು ಮಧ್ಯಾಹ್ನ 12 ಗಂಟೆಗೆ ತೆರೆಯಲಾಗುವುದು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ದರ್ಶನೋತ್ಸವಕ್ಕೆ ಚಾಲನೆ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಭಾಗವಹಿಸುವರು.

ನ. 2ರಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ನ. 3ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ರವರೆಗೆ ಮಾತ್ರ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ. ನ. 4ರಿಂದ ನ. 13ರವರೆಗೆ ಬೆಳಿಗ್ಗೆ 4 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಹಾಗೂ ಮಧ್ಯಾಹ್ನ 3 ರಿಂದ ಮಧ್ಯರಾತ್ರಿ 2 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿದೆ.

ನ. 14ರಂದು ಬೆಳಿಗ್ಗೆ 4 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಹಾಗೂ ರಾತ್ರಿ 11 ರಿಂದ ಮರುದಿನ ಬೆಳಿಗ್ಗೆ 7 ಗಂಟೆಯವರೆಗೆ ಅವಕಾಶವಿದೆ. ನ. 15ರಂದು ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುವುದು. ಅಂದು ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ನ.14ರಂದು ರಾತ್ರಿ 10.30 ಕ್ಕೆ ಸಿದ್ದೇಶ್ವರ ಸ್ವಾಮಿಯ ಚಂದ್ರಮಂಡಲ ರಥೋತ್ಸವ ಜರುಗಲಿದೆ.

ಇದೇ ಮೊದಲ ಬಾರಿಗೆ ತುಲಾಭಾರ ಸೇವೆ, ಇ–ಹುಂಡಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. 10 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದ್ದು, ಹೆಚ್ಚಿನ ಬಂದೋಬಸ್ತ್‌ ಮಾಡಲಾಗಿದೆ. ₹1 ಸಾವಿರ ಹಾಗೂ ₹300 ಮುಖಬೆಲೆಯ ವಿಶೇಷ ದರ್ಶನ ಟಿಕೆಟ್‌ ಗಳ ವ್ಯವಸ್ಥೆ ಮಾಡಲಾಗಿದೆ. ಕೆಎಸ್‌ ಆರ್‌ ಟಿಸಿ ಸಹಯೋಗದಲ್ಲಿ ನಾಲ್ಕು ಪ್ಯಾಕೇಜ್‌ ಗಳಲ್ಲಿ ವಿಶೇಷ ಪ್ರವಾಸ ಹಾಗೂ ಹೆಲಿ ಟೂರಿಸಂ, ಪ್ಯಾರಾಸೈಲಿಂಗ್‌, ಪ್ಯಾರಾ ಮೋಟರಿಂಗ್‌ ವ್ಯವಸ್ಥೆ ಮಾಡಲಾಗಿದೆ.