ಹಾಸನ: ಕಳೆದ ಹಲವು ದಿನಗಳಿಂದ ಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಅಗ್ಗುಂದ ಗ್ರಾಮದ ತೋಟದ ಮನೆಯಲ್ಲಿ ಚಿರತೆ ಸೆರೆಯಾಗಿದೆ. ಆಹಾರ ಹುಡುಕಿಕೊಂಡು ಬಂದ ಚಿರತೆಗೆ ನಾಯಿಯೊಂದು ಕಂಡಿದೆ.
ಕಳೆದ 2-3 ತಿಂಗಳಿಂದ ಚಿರತೆ ಓಡಾಟ ನಡೆಸಿತ್ತು. ಕುರಿ, ನಾಯಿಗಳನ್ನು ಹೊತ್ತೊಯ್ದು ಜನರ ನಿದ್ದೆಗೆಡಿಸಿತ್ತು. ಇದನ್ನು ಹಿಡಿಯುವಂತೆ ಅಗ್ಗುಂದ, ಸಿದ್ದರಹಳ್ಳಿ, ಬೊಮ್ಮೇನಹಳ್ಳಿ, ದುಮ್ಮೇನಹಳ್ಳಿ ಗ್ರಾಮಸ್ಥರುಗಳು ಅರಣ್ಯ ಇಲಾಖೆಗೆ ಒತ್ತಡ ಹಾಕಿದ್ದರು. ಅದರಂತೆ ಸೋಮವಾರ ಅರಣ್ಯ ಸಿಬ್ಬಂದಿ ಅಗ್ಗುಂದ ಗ್ರಾಮದ ಹೊರವಲಯದ ತೋಟದ ಮನೆಯೊಂದರಲ್ಲಿ ಬೋನ್ ಇಟ್ಟಿತ್ತು. ನಾಯಿಯನ್ನು ಬೇಟೆಯಾಡಲು ಬಂದಾಗ ಚಿರತೆ ಬೋನಿಗೆ ಬಿದ್ದಿದೆ. 2-3 ವರ್ಷದ ಚಿರತೆ ಇದಾಗಿದೆ ಎಂಬ ಮಾಹಿತಿ ಇದೆ.
ಚಿರತೆ ಬೋನಿಗೆ ಬೀಳುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಉಳಿದಿರುವ 8-10 ಚಿರತೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.