ಮನೆ ಅಪರಾಧ ಹಾಸನ: ಚಿನ್ನ, ವಿದೇಶಿ ಹಣದ ಆಮಿಷಕ್ಕೆ ಒಳಗಾಗಿ 18 ಲಕ್ಷ ರೂ.ಕಳೆದುಕೊಂಡ ವ್ಯಕ್ತಿ

ಹಾಸನ: ಚಿನ್ನ, ವಿದೇಶಿ ಹಣದ ಆಮಿಷಕ್ಕೆ ಒಳಗಾಗಿ 18 ಲಕ್ಷ ರೂ.ಕಳೆದುಕೊಂಡ ವ್ಯಕ್ತಿ

0

ಹಾಸನ(Hassan): ವ್ಯಕ್ತಿಯೊಬ್ಬರಿಗೆ ಚಿನ್ನದ ಆಭರಣ ಹಾಗೂ ವಿದೇಶ ಹಣ ಕಳುಹಿಸುವ ಆಮಿಷವೊಡ್ಡಿ 18 ಲಕ್ಷ ರೂ ವಂಚಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.

ರಾಮನಾಥಪುರ ಹೋಬಳಿಯ ಅಗ್ರಹಾರದ ಲಕ್ಷ್ಮೇನಾಥ ವಂಚನೆಗೆ ಒಳಗಾದವರು.

ಅವರ ವಾಟ್ಸಾಪ್’ಗೆ ನ.8ರಂದು ಅಪರಿಚಿತ ವ್ಯಕ್ತಿ ಕರೆಮಾಡಿ ಚಿನ್ನಾಭರಣ ಮತ್ತು ವಿದೇಶಿ ಹಣ ಕಳುಹಿಸುತ್ತಿದ್ದೇನೆಂದು ಇಮೇಜ್ ಮತ್ತು ಸಂದೇಶ ಕಳುಹಿಸಿದ್ದ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನ.9ರಂದು ಕರೆ ಮಾಡಿ ದಿಲ್ಲಿ ಏರ್’ಪೋರ್ಟ್’ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ನಿಮಗೆ ಕಳುಹಿಸಿರುವ ಗಿಫ್ಟ್ ಮತ್ತು ವಿದೇಶಿ ಹಣವನ್ನು ಕಸ್ಟಮ್ ಅಧಿಕಾರಿಗಳು ಹಿಡಿದಿದ್ದಾರೆಂದು, ವಿದೇಶಿ ಹಣಕ್ಕೆ ಟ್ಯಾಕ್ಸ್ ಕಟ್ಟಬೇಕೆಂದು 60 ಸಾವಿರ ರೂ., ನ.10ರಂದು ವಿದೇಶಿ ಹಣ ವಿನಿಮಯ ಚಾರ್ಜ್ ಕಟ್ಟಬೇಕೆಂದು ಒಂದು ಖಾತೆಗೆ 2.80 ಲಕ್ಷ ರೂ. ಮತ್ತೊಂದು ಖಾತೆಗೆ 4.25 ಲಕ್ಷ ರೂ.ಗಳನ್ನು ಆರ್’ಟಿಜಿಎಸ್ ಮೂಲಕ ಹಾಗೂ ನ.11ರಂದು ಕೊರಿಯರ್ ಚಾರ್ಜ್ ಎಂದು 60 ಸಾವಿರ ರೂ.ಗಳನ್ನು ಗೂಗಲ್ ಪೇ ಮೂಲಕ ವರ್ಗಾವಣೆ ಮಾಡಿದ್ದು, ನ.14ರಂದು ಆರ್’ಬಿಐ ಚಾರ್ಜ್ ಕಟ್ಟಬೇಕೆಂದು 5.50 ಲಕ್ಷ ರೂ.ವನ್ನು ಆರ್’ಟಿಜಿಎಸ್ ಮೂಲಕ ವರ್ಗಾಯಿಸಿದ್ದು, ನ.16ರಂದು ಪುನಃ ಕರೆ ಮಾಡಿ 2.20 ಲಕ್ಷ ರೂ. ಕಟ್ಟಿದರೆ ಗಿಫ್ಟ್ ಮತ್ತು ವಿದೇಶಿ ಹಣವನ್ನು ಕಳುಹಿಸಿಕೊಡುತ್ತೇನೆ ಎಂದು ತಿಳಿಸಿದ್ದಾನೆ. ಇದರಿಂದ ಅನುಮಾನಗೊಂಡು ಠಾಣೆಗೆ ದೂರು ನೀಡಿದ್ದಾರೆ.

ಚಿನ್ನಾಭರಣ ಮತ್ತು ವಿದೇಶಿ ಹಣ ಕಳುಹಿಸಿಕೊಡುತ್ತೇನೆಂದು ನಂಬಿಸಿ ಪಟ್ಟು 18 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾನೆ. ಅಪರಿಚಿತ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಲಕ್ಷ್ಮೀನಾಥ ಗುರುವಾರ ಹಾಸನದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.