ಹಾಸನ: ತನಗೆ ರಜೆ ನೀಡುತ್ತಿಲ್ಲ ಎಂದು ಆರೋಪಿಸಿ ಚನ್ನರಾಯಪಟ್ಟಣ ತಾಲೂಕಿನ ತಹಶೀಲ್ದಾರ್ ಕಚೇರಿ ಎದುರು ದ್ವೀತಿಯ ದರ್ಜೆ ನೌಕರ ಮೈಮೇಲೆ ಪೆಟ್ರೋಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಹೇಶ್ ಪೆಟ್ರೋಲ್ ಕುಡಿದ ಎಸ್ ಡಿಎ ನೌಕರ. ಮಹೇಶ್ ತಾಲೂಕು ಕಚೇರಿಯಲ್ಲಿ ದ್ವೀತಿಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಹೇಶ್ ಇಂದು (ಅ.30) ತಹಶೀಲ್ದಾರ್ ಗೋವಿಂದರಾಜು ಬಳಿ ಎರಡು ದಿನ ರಜೆ ಕೇಳಿದ್ದರು.ರಜೆ ಬೇಕೆಂದರೇ ನಿಮ್ಮ ಜಾರ್ಜ್ ಅನ್ನು ಬೇರೆಯವರಿಗೆ ನೀಡಿ ರಜೆ ತೆಗೆದುಕೊಳ್ಳಿ ಎಂದು ತಹಸಿಲ್ದಾರ್ ಹೇಳಿದ್ದರಂತೆ. ಇದರಿಂದ ಕೋಪಗೊಂಡ ಮಹೇಶ್ ತಹಶೀಲ್ದಾರ್ ರಜೆ ನೀಡುತ್ತಿಲ್ಲ. ಬದಲಿಗೆ ನನಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿ ಪೆಟ್ರೋಲ್ ಕುಡಿದು ಬಳಿಕ, ಮೈ ಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.
ಸ್ಥಳದಲ್ಲಿದ್ದ ಸಿಬ್ಬಂದಿ ಕೂಡಲೇ ಮಹೇಶ್ ರನ್ನು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚನ್ನರಾಯಪಟ್ಟಣದಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ, ಹಾಸನದ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಹೇಶ್ ಕಳೆದ ಒಂದು ವಾರದ ಹಿಂದೆ ವಿಷದ ಬಾಟಲಿ ತಂದು ರಜೆ ನೀಡುವಂತೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ತಹಶೀಲ್ದಾರ್ ಗೋವಿಂದರಾಜು ಜಿಲ್ಲಾಧಿಕಾರಿಗೆ ವರದಿ ನೀಡಿದ್ದರು.