ಮನೆ ಕಾನೂನು ಸರ್ಕಾರಿ, ಖಾಸಗಿ ವಿವಿಗಳಲ್ಲಿ ಮಾನಸಿಕ ಆರೋಗ್ಯ ನೀತಿ, ತಾರತಮ್ಯ ವಿರೋಧಿ ನೀತಿ ರೂಪಿಸಲು ಹೈಕೋರ್ಟ್ ಸೂಚನೆ

ಸರ್ಕಾರಿ, ಖಾಸಗಿ ವಿವಿಗಳಲ್ಲಿ ಮಾನಸಿಕ ಆರೋಗ್ಯ ನೀತಿ, ತಾರತಮ್ಯ ವಿರೋಧಿ ನೀತಿ ರೂಪಿಸಲು ಹೈಕೋರ್ಟ್ ಸೂಚನೆ

0

ಬೆಂಗಳೂರು: ವಿದ್ಯಾರ್ಥಿ ಜೀವನದ ಮೇಲೆ ಬೀರಬಹುದಾದ ಗಂಭೀರ ಹಾಗೂ ಹಾನಿಕಾರಕ ಪರಿಣಾಮ ತಡೆಗಟ್ಟುವ ನಿಟ್ಟಿನಲ್ಲಿ ಮಾನಸಿಕ ಆರೋಗ್ಯ ನೀತಿ ಮತ್ತು ತಾರತಮ್ಯ ವಿರೋಧಿ ನೀತಿ ರೂಪಿಸುವಂತೆ ಖಾಸಗಿ ಹಾಗೂ ಸರ್ಕಾರಿ ವಿವಿಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

Join Our Whatsapp Group

ತಮ್ಮನ್ನು ಕಾಲೇಜಿನಿಂದ ಅಮಾನತುಗೊಳಿಸಿ ಅಜೀಂ ಪ್ರೇಮ್‌ಜಿ ವಿವಿ ರವಾನಿಸಿರುವ ಇ – ಮೇಲ್ ರದ್ದುಗೊಳಿಸುವಂತೆ ಹಾಗೂ ಇತರ ಎಲ್ಲ ವಿದ್ಯಾರ್ಥಿಗಳಂತೆ ತರಗತಿಯಲ್ಲಿ ಕೂತು ಪಾಠ ಕೇಳುವಂತೆ ಅವಕಾಶ ಒದಗಿಸುವಂತೆ ಕೋರಿ ಪ್ರಥಮ ವರ್ಷದ ಎಂ.ಎ ವ್ಯಾಸಂಗ ಮಾಡುತ್ತಿರುವ ತೃತೀಯ ಲಿಂಗಿ ವಿದ್ಯಾರ್ಥಿ ಹೈಕೋರ್ಟ್​ ಗೆ ಅರ್ಜಿ ಸಲ್ಲಿಸಿದರು.

ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್​ ಗೋವಿಂದ್​ ರಾಜ್​ ಅವರ ಏಕಸದಸ್ಯ ಪೀಠ ಈ ಸೂಚನೆ ನೀಡಿದೆ. ಅಲ್ಲದೆ, ಈಗಾಗಲೇ ಈ ನೀತಿಯನ್ನು ರೂಪಿಸುವಲ್ಲಿ ಹಾಗೂ ಅನುಷ್ಠಾನಗೊಳಿಸುವಲ್ಲಿ ‘ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯವು’ ಕೈಗೊಂಡ ಕ್ರಮಗಳನ್ನು ಕುರಿತು ನ್ಯಾಯಪೀಠ ಶ್ಲಾಘನೆ ವ್ಯಕ್ತಪಡಿಸಿದೆ.

ಜತೆಗೆ, ಈ ರೀತಿಯ ಕ್ರಮವನ್ನು ಸರ್ಕಾರಿ ಸೇರಿದಂತೆ ಖಾಸಗಿ ವಿವಿ ಮತ್ತು ಕಾಲೇಜುಗಳು ಅನುರಿಸುವ ಅಗತ್ಯವಿದೆ. ಇದರಿಂದ ವಿದ್ಯಾರ್ಥಿ ಜೀವನದಲ್ಲಿ ಎದುರಿಸುವ ಸಮಸ್ಯೆಗಳನ್ನು ಸೂಕ್ತವಾಗಿ ಬಗೆಹರಿಸಬಹುದು ಎಂದು ಪೀಠ ತಿಳಿಸಿದೆ. ಅಲ್ಲದೇ, ಅನೇಕ ಬಾರಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಗಳು ಮತ್ತು ಸಾಮಾಜಿಕವಾಗಿ ಇತರ ಅಸಹಜ ನಡವಳಿಕೆಗಳೂ ಅವರ ಕುಟುಂಬ, ಶಿಕ್ಷಕ ಮತ್ತು ವಿದ್ಯಾರ್ಥಿ ಸಮುದಾಯವನ್ನು ಒಳಗೊಂಡಂತೆ ಎಲ್ಲರ ಮೇಲೂ ಕೆಟ್ಟ ಪರಿಣಾಮ ಬೀಳುತ್ತದೆ. ಹೀಗಾಗಿ ಅವರ ನಡುವಳಿಕೆ ಕುರಿತು ಕಾಳಜಿ ಮತ್ತು ಅವರೊಂದಿಗೆ ಸೂಕ್ಷ್ಮವಾಗಿ ವ್ಯವಹರಿಸಬೇಕಾದ ಅನಿವಾರ್ಯತೆ ಬಹಳಷ್ಟಿದೆ ಎಂದು ಪೀಠ ಹೇಳಿದೆ.

ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಅಥವಾ ಸಂಬಂಧಪಟ್ಟ ವಿಶ್ವವಿದ್ಯಾಲಯಗಳು ಅಥವಾ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಈ ನಿಟ್ಟಿನಲ್ಲಿ ಯಾವುದೇ ನೀತಿಯನ್ನು ರೂಪಿಸಿಲ್ಲ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಮತ್ತು ವಿದ್ಯಾರ್ಥಿ ಜೀವನದ ಮೇಲೆ ಬೀರಬಹುದಾದ ಗಂಭೀರ ಹಾಗೂ ಹಾನಿಕಾರಕ ಪರಿಣಾಮ ತಡೆಗಟ್ಟುವ ನಿಟ್ಟಿನಲ್ಲಿ ಮಾನಸಿಕ ಆರೋಗ್ಯ ನೀತಿ ಮತ್ತು ತಾರತಮ್ಯ ವಿರೋಧಿ ನೀತಿ ರೂಪಿಸುವಂತೆ ಎಲ್ಲ ಖಾಸಗಿ ಹಾಗೂ ಸರ್ಕಾರಿ ವಿವಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.

ವಿಚಾರಣೆ ವೇಳೆ ವಿವಿ ಪರವಾದ ಮಂಡಿಸಿದ ವಕೀಲರು, ಪ್ರಕರಣ ಕುರಿತಾಗಿ ಅರ್ಜಿದಾರರು ಕಾಲೇಜಿನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟರ್​​ ಮತ್ತು ಬರವಣಿಗೆ ಹಂಚಿಕೊಂಡಿದ್ದಾರೆ. ಅವರು ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಆಸಕ್ತಿ ತೋರದ ಹಿನ್ನೆಲೆ ವಿವಿಯೂ ಅವರಿಷ್ಟದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸುವಂತೆ ತಿಳಿಸಿದೆ.

ಹೀಗಾಗಿ ಭವಿಷ್ಯದಲ್ಲಿ ಅರ್ಜಿದಾರರು ಕಾಲೇಜಿನ ಕುರಿತು ಅವಹೇಳನಕಾರಿ ಹೇಳಿಕೆ ನೀಡಬಾರದು ಇಲ್ಲಿಯವರೆಗೆ ಸಂಸ್ಥೆಯೂ ಅವರ ವಿರುದ್ಧ ಅವಮಾನವಾಗುವ ರೀತಿಯಲ್ಲಿ ಹೇಳಿಕೆ ನೀಡಿಲ್ಲ ಎಂದರು. ಅಲ್ಲದೆ, ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯ ನೀತಿ ರೂಪಿಸದಿರುವುದು ಅನೇಕ ರೀತಿಯಲ್ಲಿ ಅಹಿತಕರ ಘಟನೆಗೆ ಕಾರಣವಾಗುತ್ತಿದೆ. ಆದರೆ ಅಜೀಂ ಪ್ರೇಮ್‌ಜಿ ವಿವಿ ಸ್ವಯಂ ಪ್ರೇರಿತವಾಗಿ ಮಾನಸಿಕ ಆರೋಗ್ಯ ನೀತಿ ರೂಪಿಸಿದ್ದು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಬಗ್ಗೆ ದಾಖಲೆಗಳ ಸಮೇತ ನ್ಯಾಯಪೀಠಕ್ಕೆ ವಿವರಿಸಿದರು.