ಬೆಂಗಳೂರು : ಚೀನಾದ ಟಿಯಾಂಜಿನ್ನಲ್ಲಿ ನಡೆದ ಎಸ್ಸಿಒ ಶೃಂಗಸಭೆ ಸಾಕಷ್ಟು ಕುತೂಹಲಕಾರಿ ಘಟನೆಗಳಿಗೆ ಸಾಕ್ಷಿಯಾಗಿದೆ. ಭಾರತ, ಚೀನಾ, ರಷ್ಯಾ ದೇಶಗಳ ಸಮಾಗಮಕ್ಕೆ ವೇದಿಕೆಯಾಗಿದೆ. ಇತ್ತ ಜಪಾನ್, ಚೀನಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪತ್ರ ಬರೆಯುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಚೀನಾ ಪ್ರವಾಸವನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಭಾರತದ ಮೇಲೆ ಅಮೆರಿಕ ಹೇರುತ್ತಿರುವ ಸುಂಕ ಯುದ್ಧಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳುತ್ತಿದ್ದಿರಿ. ಹೀಗಾಗಿ ನಿಮ್ಮ ಮೇಲೆ ಭಾರತದ ಲಕ್ಷಾಂತರ ಜನ ವಿಶ್ವಾಸವಿಟ್ಟಿದ್ದಾರೆ.
ರಷ್ಯಾ, ಚೀನಾ ಅಧ್ಯಕ್ಷರ ಜತೆ ನಿಮ್ಮ ಸ್ನೇಹ ಜಗತ್ತಿಗೆ ಹೊಸ ಸಂದೇಶ ನೀಡಿದೆ. ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ನೀವು ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಿದ್ದಕ್ಕೆ ನನಗೆ ಸಂತೋಷವಾಗಿದೆ. ನೀವು ಅನುಸರಿಸುತ್ತಿರುವ ನೀತಿಗಳು ಸಮೃದ್ಧ ಭಾರತ ನಿರ್ಮಾಣಕ್ಕೆ ಸಹಕಾರ ಆಗಲಿದೆ ಎಂದಿದ್ದಾರೆ.
ಧರ್ಮ ನಮ್ಮ ಕಡೆಗಿದೆ ಮತ್ತು ನಮ್ಮ ರಾಷ್ಟ್ರವು ಜಗತ್ತಿನಲ್ಲಿ ಬೇರೆಲ್ಲಿಯೂ ಇಲ್ಲದಷ್ಟು ಆರ್ಥಿಕ, ಜನಸಂಖ್ಯಾ ಮತ್ತು ಪ್ರಜಾಪ್ರಭುತ್ವದ ಪ್ರಯೋಜನಗಳ ಸಂಯೋಜನೆಯನ್ನು ನೀಡುವುದರಿಂದ ಅಮೆರಿಕ ಕೂಡ ಬೇಗ ಅದನ್ನು ಸರಿಪಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಅಧ್ಯಕ್ಷ ಪುಟಿನ್ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ನಿಮ್ಮ ಛಾಯಾಚಿತ್ರಗಳು ಮತ್ತು ವಿಡಿಯೋಗಳು ಜಗತ್ತಿನಾದ್ಯಂತ ಮಾಧ್ಯಮಗಳಲ್ಲಿ ತುಂಬಿ ತುಳುಕುತ್ತಿದ್ದು, ರಾಷ್ಟ್ರಗಳ ಮುಖ್ಯಸ್ಥರ ನಡುವಿನ ಸ್ನೇಹವನ್ನು ಮೀರುಸುತ್ತದೆ. ಇದು ಹೊಸ ಜಾಗೃತಿಯನ್ನು ಮತ್ತು ಭಾರತವನ್ನು ಜಾಗತಿಕ ಸಮೃದ್ಧಿ ಮತ್ತು ಶಾಂತಿಯ ಮಧ್ಯದಲ್ಲಿ ಇರಿಸುವ ಹೊಸ ವಿಶ್ವ ಕ್ರಮದ ಆರಂಭವನ್ನು ಸಂಕೇತಿಸುತ್ತದೆ.
ಭಾರತದ ಮುಂದಿರುವ ಸವಾಲನ್ನು ಯಾವುದೇ ಮೂಲ ಮೌಲ್ಯಗಳನ್ನು ತ್ಯಾಗ ಮಾಡದೆ, ಅವಕಾಶವನ್ನಾಗಿ ಪರಿವರ್ತಿಸಲು ನೀವು ದೃಢನಿಶ್ಚಯ ಮಾಡಿದ್ದೀರಿ ಎಂದು ತಿಳಿದು ನನಗೆ ಸಂತೋಷವಾಗಿದೆ. ದೇವರು ನಿಮಗೆ ಹೆಚ್ಚಿನ ಶಕ್ತಿ ಮತ್ತು ಉತ್ತಮ ಆರೋಗ್ಯವನ್ನು ನೀಡಲಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.














