ಮನೆ ರಾಜ್ಯ ಎಚ್‌.ಡಿ. ಕುಮಾರಸ್ವಾಮಿ ಸುಳ್ಳು ಹೇಳುತ್ತಾನೆ: ಸಿಎಂ ಸಿದ್ದರಾಮಯ್ಯ

ಎಚ್‌.ಡಿ. ಕುಮಾರಸ್ವಾಮಿ ಸುಳ್ಳು ಹೇಳುತ್ತಾನೆ: ಸಿಎಂ ಸಿದ್ದರಾಮಯ್ಯ

0

ಮೈಸೂರು: ವಿದ್ಯುತ್‌ ಪೂರೈಕೆಗೆ ನಮ್ಮ ಸರ್ಕಾರ ಕ್ರಮ ವಹಿಸಿದೆ. ಹೀಗಿದ್ದರೂ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸುಳ್ಳು ಹೇಳುತ್ತಾನೆ. ಆರೋಪಿಸುವುದಷ್ಟೇ ಅವನಿಗೆ ಗೊತ್ತು, ಏನನ್ನೂ ತಿಳಿದುಕೊಳ್ಳುವುದಕ್ಕೂ ಪ್ರಯತ್ನಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೋದ ವರ್ಷ ಇದೇ ಸಮಯದಲ್ಲಿ 10ಸಾವಿರದಿಂದ 11ಸಾವಿರ ಮೆಗಾವಾಟ್ ವಿದ್ಯುತ್‌ ಬೇಕಾಗಿತ್ತು. ಆದರೆ, ಈ ಬಾರಿ 15ಸಾವಿರದಿಂದ 16ಸಾವಿರ ಮೆಗಾ ವಾಟ್ ಬೇಕಾಗಿದೆ. ನಮಗೆ 32ಸಾವಿರ ಮೆಗಾ ವಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವಿದೆ (‌ಸ್ಥಾಪಿತ). ಆದರೆ, ಅಷ್ಟನ್ನು ಉತ್ಪಾದಿಸಲು ಆಗುತ್ತಿಲ್ಲ ಎಂದು ಹೇಳಿದರು.

ಈ ಬಾರಿ ವಿದ್ಯುತ್‌ಗೆ ಬೇಡಿಕೆ ಜಾಸ್ತಿಯಾಗಿದೆ. ಮಳೆ ಇಲ್ಲದಿದ್ದರಿಂದ ರೈತರು, ನದಿಯಿಂದ ನೀರು ತೆಗೆದುಕೊಳ್ಳಲು ಪಂಪ್‌ ಸೆಟ್‌ ಬಳಸುತ್ತಿದ್ದಾರೆ. ಹೀಗಾಗಿ, ವಿದ್ಯುತ್‌ ಜಾಸ್ತಿ ಬೇಕಾಗುತ್ತಿದೆ. ಆದ್ದರಿಂದ ಪಂಪ್‌ ಸೆಟ್‌ ಗಳಿಗೆ 5 ತಾಸು ನಿಯಮಿತವಾಗಿ ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದರೆ, ರಾಯಚೂರು, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಭತ್ತ ಹಾಗೂ ಕಬ್ಬು ಬೆಳೆಯುತ್ತಾರೆ. ಅಲ್ಲಿನ ರೈತರು ನಮಗೆ 7 ತಾಸು ಕೊಡಬೇಕು ಎಂದು ಹೇಳಿದ್ದರು. ಆ ಭಾಗದಲ್ಲಿ 7 ಗಂಟೆಯೇ ಕೊಡಿ ಎಂದಿದ್ದೇನೆ. ಎಲ್ಲಿ ಭತ್ತ ಕಡಿಮೆ ಬೆಳೆಯುತ್ತಾರೆಯೋ ಅಲ್ಲಿಗೆ ನಿರಂತರವಾಗಿ 5 ತಾಸು ನಿರಂತರವಾಗಿ ತ್ರಿಫೇಸ್ ಪೂರೈಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಕೆಲವು ಕಡೆಗಳಲ್ಲಿ ಮಾತ್ರವೇ ರಾತ್ರಿ ವೇಳೆ ವಿದ್ಯುತ್‌ ಕೊಡುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಹಗಲಲ್ಲೇ ಸರಬರಾಜಾಗುತ್ತಿದೆ ಎಂದು ಸಮರ್ಥಿಸಿಕೊಂಡರು.