ಬೆಂಗಳೂರು: ರಾಜ್ಯ ಸರ್ಕಾರದ ಒತ್ತಡದ ಕಾರಣದಿಂದ ಉದ್ಯಮಿ ವಿಜಯ್ ತಾತಾ ನಮ್ಮ ವಿರುದ್ಧ ದೂರು ನೀಡಿದ್ದಾನೆ. ಮುಖ್ಯಮಂತ್ರಿ ಕಚೇರಿ ಮತ್ತು ಕೆಲ ಸಚಿವರು ಇಂತಹ ಒತ್ತಡ ಹೇರುತ್ತಿದ್ದಾರೆ ಎಂದು ಜೆಡಿಎಸ್ ನ ಎಚ್.ಎಂ.ರಮೇಶ್ ಗೌಡ ಆರೋಪಿಸಿದ್ದಾರೆ.
ಚುನಾವಣೆ ವೆಚ್ಚಕ್ಕೆ ₹ 50 ಕೋಟಿ ಕೊಡು, ಇಲ್ಲದೇ ಇದ್ದರೆ ನಿನ್ನನ್ನು ಬದುಕಲು ಬಿಡುವುದಿಲ್ಲ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್‌ನ ಎಚ್.ಎಂ.ರಮೇಶ್‌ಗೌಡ ಬೆದರಿಕೆ ಒಡ್ಡಿರುವುದಾಗಿ ವಿಜಯ್ ತಾತಾ ಅವರು ಗುರುವಾರ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ರಮೇಶ್‌ಗೌಡ, ‘ವಿಜಯ್ ತಾತಾ ವಿರುದ್ಧ ದೂರು ನೀಡಲು ನಾನೂ ಪೊಲೀಸ್ ಠಾಣೆಗೆ ಹೋಗಿದ್ದೆ. ಆತ ಅಲ್ಲೇ ಇದ್ದರು. ‘ಯಾಕೆ ಸುಳ್ಳು ದೂರು ನೀಡಿದ್ದೀಯಾ’ ಎಂದು ಪ್ರಶ್ನಿಸಿದೆ. ಆತ, ‘ನನ್ನ ಮೇಲೆ ಒತ್ತಡ’ ಇದೆ ಎಂದು ಎಲ್ಲವನ್ನೂ ವಿವರಿಸಿದರು’ ಎಂದು ಹೇಳಿದರು.
ಆತ ಏನು ಹೇಳಿದ ಎಂಬುದು ಪೊಲೀಸ್ ಠಾಣೆಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ದಾಖಲಾಗಿರುತ್ತದೆ. ಅದನ್ನು ಪರಿಶೀಲಿಸಬೇಕು. ಗುಪ್ತಚರ ಇಲಾಖೆಯು ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದೆ. ಇದರ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇನೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದರು.
ವಂಚನೆಯೇ ವಿಜಯ್ ತಾತಾನ ಉದ್ಯಮ. ಆತನ ವಿರುದ್ಧ ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರದ ಮುಂಬೈ, ಪುಣೆಯಲ್ಲೂ ನೂರಾರು ಪ್ರಕರಣ ದಾಖಲಾಗಿದೆ. ಆತನಿಂದ ವಂಚನೆಗೆ ಒಳಗಾದವರಿಗೆ ನ್ಯಾಯ ಒದಗಿಸಿಕೊಡುವ ಉದ್ದೇಶದಿಂದ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಒತ್ತಾಯಿಸಿದರು.