ಬೆಂಗಳೂರು: ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಬೀಗ ಒಡೆದು ಕಳವು ಮಾಡುತ್ತಿದ್ದ ಆರೋಪಿಯನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಿಗಳರಪೇಟೆ ನಿವಾಸಿ ಮಂಜುನಾಥ್ ಅಲಿಯಾಸ್ ಪಾರಿವಾಳ ಮಂಜ(39) ಬಂಧಿತ. ಆರೋಪಿಯಿಂದ 30 ಲಕ್ಷ ರೂ. ಮೌಲ್ಯದ 475 ಗ್ರಾಂ ಚಿನ್ನಾಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನಗಳ ಜಪ್ತಿ ಮಾಡಲಾಗಿದೆ.
ಆರೋಪಿಯು ಆರಂಭದಲ್ಲಿ ಕಟ್ಟಡಗಳ ಮೇಲೆ ನಿಂತು ಪರಿವಾಳ ಹಾರಿಸುತ್ತಿದ್ದ. ಬಳಿಕ ಪರಿವಾಳ ಹಿಡಿ ದುಕೊಳ್ಳುವ ನೆಪದಲ್ಲಿ ಬೀಗ ಹಾಕಿದ ಮನೆಗಳ ಬೀಗ ಮುರಿದು ಕಳವು ಮಾಡಿ ಪರಾರಿಯಾಗುತ್ತಿದ್ದ. ಹೀಗಾಗಿ ಈತನನ್ನು ಪಾರಿವಾಳ ಮಂಜ ಎಂದೂ ಕರೆಯ ಲಾಗುತ್ತದೆ. ಇತ್ತೀಚೆಗೆ ಹಗಲಿನಲ್ಲಿ ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಬೀಗ ಮುರಿದು ಕಳವು ಮಾಡುತ್ತಿದ್ದ. ಕದ್ದ ಮಾಲುಗಳನ್ನು ವಿವಿಧ ಜ್ಯುವೆಲ್ಲರಿ ಅಂಗಡಿಗಳಲ್ಲಿ ವಿಲೇವಾರಿ ಮಾಡಿ ಮೋಜು-ಮಸ್ತಿ ಮಾಡುತ್ತಿದ್ದ.
ಚಿಕ್ಕಪೇಟೆ ನಿವಾಸಿ ಉಪೇಶ್ ಭಂಡಾರಿ ಎಂಬುವರು ಮನೆಯ ಬೀಗ ಹಾಕಿಕೊಂಡು ಕಾರ್ಯನಿಮಿತ್ತ ಊರಿಗೆ ಹೋಗಿದ್ದರು. ಕಳೆದ ಏ. 5ರಂದು ವಾಪಸ್ ಬಂದಾಗ ಮನೆಯ ಬೀಗ ಮುರಿದು ಕಳವು ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ವಿರುದ್ಧ 30 ಮನೆಗಳ್ಳತನ ಕೇಸ್:
ಆರೋಪಿ ಮಂಜುನಾಥ ವೃತ್ತಿಪರ ಕಳ್ಳನಾಗಿದ್ದು, ಹಲವು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ. ಈತನ ವಿರುದ್ಧ ಈ ಹಿಂದೆ ಚಿಕ್ಕಪೇಟೆ, ಹಲಸೂರು ಗೇಟ್, ಎಸ್.ಜೆ.ಪಾರ್ಕ್, ಬನಶಂಕರಿ, ಶಂಕರಪುರ, ವಿದ್ಯಾರಣ್ಯಪುರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 30ಕ್ಕೂ ಅಧಿಕ ಮನೆ ಕಳವು ಪ್ರಕರಣಗಳು ದಾಖಲಾಗಿವೆ. 5 ತಿಂಗಳ ಹಿಂದೆಯಷ್ಟೇ ಜಾಮೀನು ಪಡೆದು ಬಿಡುಗಡೆಯಾಗಿದ್ದ ಆರೋಪಿ, ನಗರದ ವಿವಿಧೆಡೆ ಮತ್ತೆ ಮನೆಗಳವು ಮಾಡಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.