ಮೈಸೂರು: ಹೆಚ್.ಡಿ.ಕೋಟೆ: ತಾಲ್ಲೂಕಿನ ಹಂಪಾಪುರ ಹೋಬಳಿಯ ಜಿ.ಬಿ.ಸರಗೂರು ಗ್ರಾಮ ಪಂಚಾಯಿತಿಯಲ್ಲಿ ಇಂದು ನರೇಗಾ ಯೋಜನೆಯ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಯೋಜನೆ ಸಹಕಾರದೊಂದಿಗೆ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಕಿರಣ್ ಜಹಗೀರ್ ಧಾರ್ ಅವರು ಮಾತನಾಡಿದರು.
ಯಾವುದೇ ವ್ಯಕ್ತಿಯು ಲವಲವಿಕೆಯಿಂದಿರಲು ಆರೋಗ್ಯ ಅತೀ ಮುಖ್ಯ, ಹಾಗಾಗಿ ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಪರೀಕ್ಷೆ ಕೈಗೊಂಡಿರುವುದು ಒಳ್ಳೆಯ ಕಾರ್ಯ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ನರೇಗಾ ಯೋಜನೆಯಡಿ ಕೆಲಸ ಮಾಡಲು ಮುಂದೆ ಬರಬೇಕು. ಜತೆಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ತಮ್ಮ ಆರೋಗ್ಯದ ಕಡೆಯೂ ಹೆಚ್ಚು ಗಮನಹರಿಸುವಂತೆ ಸಲಹೆ ನೀಡಿದರು.
ಶಿಬಿರದಲ್ಲಿ ಒಟ್ಟು 56 ಮಂದಿ ಕೂಲಿಕಾರರಿಗೆ ತಪಾಸಣೆ ಮಾಡಲಾಯಿತು. 19 ಪುರುಷರು, 37 ಮಹಿಳೆಯರು ಆರೋಗ್ಯ ತಪಾಸಣೆಗೆ ಒಳಗಾದರು. ಅದರಲ್ಲಿ 9 ಜನರಿಗೆ ಬಿಪಿ, ಹಾಗೂ ಶುಗರ್ ಇರುವುದು ಕಂಡು ಬಂದಿದ್ದು, ಅವರನ್ನು ಹೆಚ್ಚಿನ ತಪಾಸಣೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆರೋಗ್ಯ ಸಂಯೋಜಕರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿಜಯ ರಮೇಶ್, ಸದಸ್ಯರಾದ ತಿಮ್ಮಚಾರಿ, ಬಸವರಾಜು, ಪಿಡಿಒ ಪ್ರಶಾಂತ್, ಆರೋಗ್ಯ ಸಂಯೋಜಕರಾದ ರಾಘವೇಂದ್ರ, ಪುಟ್ಟರಾಜು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.