ಮನೆ ರಾಜ್ಯ ರಾಜ್ಯಾದ್ಯಂತ ಮುಂದಿನ 4 ದಿನ ಭಾರಿ ಮಳೆ ಸಾಧ್ಯತೆ

ರಾಜ್ಯಾದ್ಯಂತ ಮುಂದಿನ 4 ದಿನ ಭಾರಿ ಮಳೆ ಸಾಧ್ಯತೆ

0

ಬೆಂಗಳೂರು (Bengaluru)- ರಾಜ್ಯಾದ್ಯಂತ ಮುಂದಿನ ನಾಲ್ಕು ದಿನ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದಿನಿಂದ ಜೂ.7ರವರೆಗೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗುರುವಾರ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ 5 ಸೆಂ.ಮೀ, ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಮಾಣಿ, ತುಮಕೂರು ಜಿಲ್ಲೆಯ ಬರಗೂರಿನಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಇದೇ ವೇಳೆ ಕಲಬುರಗಿ ಮತ್ತು ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ನೈಋುತ್ಯ ಮುಂಗಾರು ಮಾರುತಗಳು ಕಳೆದ ಭಾನುವಾರವೇ ಕೇರಳ ಪ್ರವೇಶಿಸಿದ್ದು, ವಾಡಿಕೆಗಿಂತಲೂ ಮೂರು ದಿನ ಮೊದಲೇ ಆಗಮನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಸಾಮಾನ್ಯವಾಗಿ ಜೂ.1ರಂದು ಮಾನ್ಸೂನ್‌ ಕೇರಳ ಪ್ರವೇಶಿಸುವುದು ವಾಡಿಕೆ.

ಕೇರಳದಲ್ಲಿ ಮಾನ್ಸೂನ್‌ ಪ್ರಭಾವದ ಹಿನ್ನಲೆಯಲ್ಲಿ ಕರ್ನಾಟಕ ಕರಾವಳಿಯಲ್ಲೂ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅವಧಿಗೂ ಮುನ್ನವೇ ಮುಂಗಾರು ಆಗಮಿಸಿದ್ದು, ಈಗಾಗಲೇ ರಾಜ್ಯಾದ್ಯಂತ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡಿವೆ.

ದಾಖಲೆಯ ಮುಂಗಾರು ಪೂರ್ವ ಮಳೆ:

ಕಳೆದ ಮಾರ್ಚ್‌ನಿಂದ ಮೇ 28ರವರೆಗೆ ಕರ್ನಾಟಕ ಸೇರಿ ದಕ್ಷಿಣ ಭಾರತದ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತಲೂ ಅತ್ಯಧಿಕ ಮುಂಗಾರು ಪೂರ್ವ ಮಳೆಯಾಗಿದೆ. ಕರ್ನಾಟಕದಲ್ಲಿ ಶೇ.136, ಕೇರಳದಲ್ಲಿ ಶೇ.12, ಪುದುಚರಿಯಲ್ಲಿ ಶೇ.87, ಆಂಧ್ರ ಪ್ರದೇಶದಲ್ಲಿ ಶೇ.34 ಅಧಿಕ ಮಳೆಯಾಗಿದೆ. ತೆಲಂಗಾಣದಲ್ಲಿ ಮಾತ್ರ ಮುಂಗಾರು ಪೂರ್ವ ಮಳೆಯ ಪ್ರಮಾಣ ಶೇ. 28ರಷ್ಟು ಕಡಿಮೆಯಾಗಿದೆ ಎಂದು ಇಲಾಖೆ ಹೇಳಿದೆ.