ಮನೆ ರಾಜ್ಯ ದಕ್ಷಿಣ ಕನ್ನಡದ ಹಲವೆಡೆ ಕಾಡಾನೆ ಹಾವಳಿ: ಬೆಳೆ ನಾಶ, ರೈತರು ಕಂಗಾಲು

ದಕ್ಷಿಣ ಕನ್ನಡದ ಹಲವೆಡೆ ಕಾಡಾನೆ ಹಾವಳಿ: ಬೆಳೆ ನಾಶ, ರೈತರು ಕಂಗಾಲು

0

ದಕ್ಷಿಣ ಕನ್ನಡ (Dakshina Kannada): ಜಿಲ್ಲೆಯ ಕೆಲವೆಡೆ ಕಾಡಾನೆಗಳ ದಾಳಿ ಮುಂದುವರಿದಿದೆ. ಅರಣ್ಯ ಪ್ರದೇಶಗಳಲ್ಲಿ ಬೀಡುಬಿಟ್ಟಿರುವ ಆನೆಗಳು ಸಂಜೆಯಾಗುತ್ತಿದ್ದಂತೆ ನಾಡಿಗೆ ಇಳಿದು ಬೆಳೆಗಳನ್ನು ನಾಶಪಡಿಸುತ್ತಿವೆ.

ರೈತರು ಗರ್ನಾಲ್‌, ಪಟಾಕಿ ಸಿಡಿಸಿ ಆನೆಗಳನ್ನು ಓಡಿಸುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಿಲ್ಲ. ಕೆಲವೊಮ್ಮೆ ಹಗಲಿನಲ್ಲೂ ಆನೆಗಳು ಇಲ್ಲಿ ಕಾಣ ಸಿಗುತ್ತವೆ. ಹೀಗಾಗಿ ಜನ ಓಡಾಡಲೂ ಭಯಪಡುವಂತಾಗಿದೆ.

ಕೊಂಬಾರು ಗ್ರಾ.ಪಂ. ವ್ಯಾಪ್ತಿಯ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮಗಳ ಕೃಷಿ ತೋಟಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿವೆ. ದಿನನಿತ್ಯ ಅಪಾರ ಪ್ರಮಾಣದ ಕೃಷಿ ನಾಶ ಮಾಡುತ್ತಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ.

ಈ ಅವಳಿ ಗ್ರಾಮಗಳಲ್ಲಿ ಜನವಸತಿ ಪ್ರದೇಶಕ್ಕಿಂತ ಹೆಚ್ಚು ಅರಣ್ಯವೇ ಆವರಿಸಿಕೊಂಡಿದೆ. ಎರಡೂ ಗ್ರಾಮಗಳ ಒಟ್ಟು ವಿಸ್ತೀರ್ಣ 17,118.33 ಎಕರೆ. ಅದರಲ್ಲಿ14,437.74 ಎಕರೆ ಪ್ರದೇಶ ಅರಣ್ಯವಿದೆ. ಇಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿರುವ ಜನರನ್ನು ಆನೆಗಳ ಉಪಟಳ ನಿರಂತರವಾಗಿ ಕಾಡುತ್ತಿದೆ. ಅಡಕೆ, ರಬ್ಬರ್‌, ಬಾಳೆ, ತೆಂಗು ಮತ್ತಿತರ ಬಹುತೇಕ ಕೃಷಿ, ನೀರಾವರಿ ಪೈಪ್‌ಗಳು ಆನೆಗಳ ದಾಳಿಗೆ ಒಳಗಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸುತ್ತಿದೆ.

ಸಿರಿಬಾಗಿಲು ಗ್ರಾಮದ ಬಾರ್ಯ ಪಿ.ಎಸ್‌.ಹೊನ್ನಪ್ಪ ಗೌಡರಿಗೆ ಸೇರಿದ ಸುಮಾರು 185 ಅಡಿಕೆ ಮರಗಳನ್ನು ಆನೆಗಳು ನಾಶ ಮಾಡಿವೆ. ಚಾರ್ಮಾಡಿ ಗ್ರಾಮದ ಮಠದ ಮಜಲು ಎಂಬಲ್ಲಿ ಅನಂತರಾವ್‌ ಎಂಬವರ ತೋಟಕ್ಕೆ ಬುಧವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿದ್ದು, 30 ಅಡಕೆ ಮರ ಹಾಗೂ ಒಂದು ಹಲಸಿನ ಮರ ಮುರಿದು ಹಾಕಿವೆ. ಹಲವು ಬಾರಿ ಒಂಟಿ ಸಲಗ ಸಹಿತ ಕಾಡಾನೆಗಳ ಹಿಂಡು ದಾಳಿ ನಡೆಸಿದ್ದು, ಲಕ್ಷಾಂತರ ರೂ. ಮೌಲ್ಯದ ಕೃಷಿ ಹಾನಿ ಉಂಟಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅತ್ಯಧಿಕ ಬೆಳೆ ನಾಶವಾಗಿದೆ. ಈ ಹಾನಿಗಳಿಗೆ ಸರಕಾರದಿಂದ ಲಭಿಸುವ ಪರಿಹಾರ ಧನ ಮಾತ್ರ ಅತ್ಯಲ್ಪ.

ಅರಣ್ಯ ಇಲಾಖೆಯವರು ಕೃಷಿ ಹಾನಿ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡಿ ಸರಕಾರದ ಮಾರ್ಗಸೂಚಿ ಪ್ರಕಾರ ಸಿಗುವ ಪರಿಹಾರ ಮಾತ್ರ ಏನೇನೂ ಸಾಲದು. ಒಂದು ಅಡಕೆ ಗಿಡವನ್ನು ಬೆಳಸಿ ಫಸಲು ಬರುವಂತೆ ಮಾಡಬೇಕಾದೆ ಕನಿಷ್ಟ 3-4 ಸಾವಿರ ರೂ. ಖರ್ಚಾಗುತ್ತದೆ. ಅಂತಹ ಗಿಡಗಳು ನಾಶವಾದರೆ ಒಂದು ಮರಕ್ಕೆ ಸಿಗುವ ಪರಿಹಾರ ಹೆಚ್ಚೆಂದರೆ 800 ರೂ. ಮಾತ್ರ ಎನ್ನುವುದು ಕೃಷಿಕರ ಅಳಲು.

ಆನೆಗಳು ಸಂಚರಿಸುವ ಪ್ರದೇಶಗಳಲ್ಲಿ ಸಾರ್ವಜನಿಕರು ಓಡಾಡದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಆನೆ ದಾಳಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಸರಕಾರದ ನಿಯಮಾನುಸಾರ ಪರಿಹಾರ ನೀಡಲಾಗುತ್ತಿದೆ ಎಂದು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ತಿಳಿಸಿದರು.


ಹಿಂದಿನ ಲೇಖನಜೂನ್‌ 3ರ ರಾಶಿ ಭವಿಷ್ಯ
ಮುಂದಿನ ಲೇಖನರಾಜ್ಯಾದ್ಯಂತ ಮುಂದಿನ 4 ದಿನ ಭಾರಿ ಮಳೆ ಸಾಧ್ಯತೆ