ಮಂಡ್ಯ: ಮದ್ದೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗುರುವಾರ ಬಿರುಗಾಳಿ ಸಹಿತ ಭಾರಿ ಮಳೆ ಸುರಿದು ಪರಿಣಾಮ ಸಾರ್ವಜನಿಕರ ಜೀವನ ಅಸ್ತವ್ಯಸ್ತವಾಗಿತ್ತು.
ಮದ್ದೂರು ತಾಲೂಕಿನ ವೈದ್ಯನಾಥಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮಧು (34) ತಮ್ಮ ಪತ್ನಿಯನ್ನು ತವರು ಮನೆಗೆ ಬಿಟ್ಟು ಹಿಂದಿರುಗುವಾಗ ಮಾದರಹಳ್ಳಿ-ಹರಳಹಳ್ಳಿ ಗ್ರಾಮದ ಮಧ್ಯೆ ಮರದಡಿ ನಿಂತಿದ್ದರು. ಇದೇ ವೇಳೆ ಸಿಡಿಲು ಬಡಿದು ಅವರು ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಸಿಡಿಲಿನ ಆರ್ಭಟಕ್ಕೆ ಬೆದರಿದ ಮದ್ದೂರು ಪಟ್ಟಣದ ಶಿವಪುರ ನಿವಾಸಿ ಗೌರಮ್ಮ (60) ಮನೆಯಲ್ಲಿ ಕುಸಿದುಬಿದ್ದರು. ತಕ್ಷಣವೇ ಕುಟುಂಬಸ್ಥರು ಆಸ್ಪತ್ರೆಗೆ ರವಾನಿಸಿದ್ದಾರೆ. ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ಮದ್ದೂರು ತಾಲೂಕಿನ ಮಾಲಗಾರನಹಳ್ಳಿ, ಕೆ.ಕೋಡಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುರಿದ ಮಳೆಗೆ ಕೆಲವು ಮನೆಗಳ ಮೇಲ್ಟಾವಣಿ ಹಾರಿ ಹೋಗಿದೆ. ಮನೆಗಳಲ್ಲಿದ್ದ ವಸ್ತುಗಳು ಹಾನಿಗೊಂಡಿವೆ.
ವಿವಿಧೆಡೆ ವಿದ್ಯುತ್ ಕಂಬಗಳು, ಮರಗಳು ಮುರಿದು ಬಿದ್ದಿವೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮದ್ದೂರು ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದ ಸಮೀಪ ಬೃಹತ್ ಮರವೊಂದು ವಿದ್ಯುತ್ ತಂತಿಗಳ ಮೇಲೆ ಬಿದ್ದು ಸರ್ವಿಸ್ ರಸ್ತೆಗೆ ಮರ ಉರುಳಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ರಾಷ್ಟ್ರೀಯ ಹೆದ್ದಾರಿಯ ಮೇಲು ಸೇತುವೆ ಮೇಲಿಂದ ಮಳೆ ನೀರು ಸರ್ವಿಸ್ ರಸ್ತೆಗೆ ಹರಿದು ಬಂದಿದ್ದು, ಅಪಾರ ಪ್ರಮಾಣದ ನೀರು ದ್ವಿಚಕ್ರ ವಾಹನ ಸವಾರರ ಮೇಲೆ ಸುರಿದಿದೆ.