ಮನೆ ರಾಜ್ಯ ಪಕ್ಷಕ್ಕೆ ಏನು ಮಾಡಬೇಕೋ ಎಲ್ಲವನ್ನೂ ಮಾಡಿದ್ದೇನೆ, ಎಲ್ಲರೂ ನನಗೆ ಸಹಕಾರ ನೀಡುತ್ತಾರೆ: ಡಿ.ಕೆ. ಶಿವಕುಮಾರ್

ಪಕ್ಷಕ್ಕೆ ಏನು ಮಾಡಬೇಕೋ ಎಲ್ಲವನ್ನೂ ಮಾಡಿದ್ದೇನೆ, ಎಲ್ಲರೂ ನನಗೆ ಸಹಕಾರ ನೀಡುತ್ತಾರೆ: ಡಿ.ಕೆ. ಶಿವಕುಮಾರ್

0

ಬೆಂಗಳೂರು: ಪಕ್ಷಕ್ಕೆ ಏನು ಮಾಡಬೇಕೋ ಎಲ್ಲವನ್ನೂ ಮಾಡಿದ್ದೇನೆ. ಶ್ರಮ ಹಾಕಿ ದುಡಿದಿದ್ದೇನೆಎಲ್ಲರೂ ನನಗೆ ಸಹಕಾರ ಕೊಟ್ಟು, ಆಶೀರ್ವಾದ ಮಾಡುತ್ತಾರೆ. ಒಂದು ಉತ್ತಮವಾದ ಕಾಂಗ್ರೆಸ್ ಸರ್ಕಾರ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

Join Our Whatsapp Group

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ಸಂಕಷ್ಟದ ಕಾಲದಲ್ಲಿ ಪಕ್ಷವನ್ನು ಮುನ್ನಡೆಸಿದ್ದೇನೆ. ಈಗ ಹಿರಿಯರು, ಕಿರಿಯರು ಎಲ್ಲರೂ ನನಗೆ ಸಹಕಾರ ಕೊಡುತ್ತಾರೆ ಎಂದು ಹೇಳಿದರು.

ದಿನೇಶ್ ಗುಂಡೂರಾವ್ ಸ್ವಯಂಪ್ರೇರಿತವಾಗಿ ರಾಜೀನಾಮೆ ಕೊಟ್ಟಾಗ ಸೋನಿಯಾ ಗಾಂಧಿಯವರು ನನಗೆ ಅಧಿಕಾರ ಕೊಟ್ಟರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಉಪ ಚುನಾವಣೆ ಮುಗಿದ ಬಳಿಕ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ಹೇಳಿದ್ದರು. ನಾನು ಅಧಿಕಾರ ಸ್ವೀಕರಿಸಿದ ದಿನದಿಂದ ನಿದ್ದೆ ಇಲ್ಲದೆ ಕೆಲಸ ಮಾಡಿದ್ದೇನೆ ಎಂದರು.

ಕಾಂಗ್ರೆಸ್ ನಲ್ಲಿ ಯಾವುದೇ ರೀತಿಯ ಅಧಿಕಾರ ಹಂಚಿಕೆಯ ಚರ್ಚೆ ನಡೆದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಏನು ತೀರ್ಮಾನ ಮಾಡುತ್ತಾರೋ ಅದೇ ಅಂತಿಮ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಒಂದು ತಿಂಗಳ ಹಿಂದೆ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ ಬಹುಮತ ದೊರಕುತ್ತದೆ ಎಂದು ಹೇಳಲಾಗಿತ್ತು. ನಂತರ 20 ಸ್ಥಾನ ಕಡಿಮೆ ತೋರಿಸಿದರು. ಕಾಂಗ್ರೆಸ್ ಈ ಚುನಾವಣೆಯಲ್ಲಿ ಖಚಿತವಾಗಿ 141 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಸಿಂಗಪುರ ಪ್ರವಾಸ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಅವರು ನನಗಿಂತ ಒಂದು ವರ್ಷ ಹಿರಿಯರು. ಅವರು ಆರೋಗ್ಯ ಸುಧಾರಣೆಗೆ ಹೋಗಿರಬಹುದು. ಅವರ ಲೆಕ್ಕಾಚಾರ ನಮಗೆ ಏಕೆ ಎಂದರು.

ರೆಸಾರ್ಟ್ ರಾಜಕಾರಣ 25 ವರ್ಷಗಳ ಹಿಂದೆಯೇ ಮುಗಿದಿದೆ. ಎಷ್ಟೇ ಸ್ಥಾನ ಬಂದರೂ ಸರ್ಕಾರ ರಚಿಸುವುದಾಗಿ ಬಿಜೆಪಿಯವರು ಹೇಳಿದ್ದಾರೆ. ಅದು ಅವರ ಭ್ರಮೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಿಂದಿನ ಲೇಖನನೋಕಿಯಾ 105 ಪ್ಲಸ್ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ: ಆಫರ್ ತಿಳಿಯಲು ಸುದ್ದಿ ಓದಿ
ಮುಂದಿನ ಲೇಖನರಿಲೀಸ್ ಆದ 24 ಗಂಟೆಯಲ್ಲೇ ಹೊಸ ದಾಖಲೆ ಬರೆದ ʼಆದಿಪುರುಷ್ʼ ಟ್ರೈಲರ್