ಮನೆ ಅಪರಾಧ ಹೇಮಂತ್ ಗೌಡ ಹತ್ಯೆ ಪ್ರಕರಣ: ಪೊಲೀಸರ ಮೇಲೆ ಹಲ್ಲೆ- ಗುಂಡು ಹಾರಿಸಿ ಆರೋಪಿಯ ಬಂಧನ

ಹೇಮಂತ್ ಗೌಡ ಹತ್ಯೆ ಪ್ರಕರಣ: ಪೊಲೀಸರ ಮೇಲೆ ಹಲ್ಲೆ- ಗುಂಡು ಹಾರಿಸಿ ಆರೋಪಿಯ ಬಂಧನ

0

ದೊಡ್ಡಬಳ್ಳಾಪುರ: ನಗರದ ಹೊರವಲಯದ ಬಾಶೆಟ್ಟಿಹಳ್ಳಿಯಲ್ಲಿನ ಹೋಟೆಲ್ ಸಮೀಪ ಮೇ. 10 ರಂದು ನಡೆದಿದ್ದ ಹೇಮಂತ್ ಗೌಡ ಯುವಕನ ಹತ್ಯೆ ಪ್ರಕರಣದ ಎರಡನೇ ಆರೋಪಿ ಶ್ರೀನಿವಾಸ್ ಎಂಬವರನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆದಿದ್ದು, ಇನ್ಸ್ ಪೆಕ್ಟರ್ ಸಾಧಿಕ್ ಪಾಷ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿರುವ ಘಟನೆ ಮೇ.17ರ ಶುಕ್ರವಾರ ಬೆಳಿಗ್ಗೆ ನಡೆದಿದೆ.

Join Our Whatsapp Group

ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಯಲಹಂಕ ತಾಲೂಕಿನ ಶ್ರೀರಾಮನಹಳ್ಳಿ ಮನೆಯೊಂದರಲ್ಲಿ ಇರುವ ಕುರಿತು ಖಚಿತ ಮಾಹಿತಿ ಪಡೆದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿ ತಪ್ಪಿಸಿಕೊಂಡು ಹೋಗುವಾಗ ಪೊಲೀಸ್ ಹೆಡ್ ಕಾನ್ಸಟೇಬಲ್ ಚಂದ್ರಶೇಖರ್  ಹಿಡಿಯಲು ಮುಂದಾದಾಗ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.

ಈ ಹಿನ್ನೆಲೆ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಸಾಧಿಕ್ ಪಾಷ ಆರೋಪಿ ಶ್ರೀನಿವಾಸನ ಎಡ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಹೇಮಂತ್ ಗೌಡ ಕೊಲೆ ಪ್ರಕರಣದಲ್ಲಿ ಈವರೆಗೆ ಇಬ್ಬರನ್ನು ಬಂಧಿಸಲಾಗಿದೆ. ಕೊಲೆ ಪ್ರಕರಣದ ಮೊದಲನೇ ಆರೋಪಿ ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆ ಮೊದಲ ಆರೋಪಿಯಾಗಿದ್ದು, ಇತ್ತೀಚೆಗಷ್ಟೇ ಈತನನ್ನು ಬಂಧಿಸಲಾಗಿದೆ. ಈಗ ಈತನ ಸಹೋದರ ಮೇಡಹಳ್ಳಿ ನಿವಾಸಿ 2ನೇ ಆರೋಪಿ ಶ್ರೀನಿವಾಸ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾದ ವೇಳೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಬಂಧಿತ ಶ್ರೀನಿವಾಸ್, ನರಸಿಂಹಮೂರ್ತಿ ಅವರ ಮೇಲೆ ಈಗಾಗಲೇ ಹಲವಾರು ಕೊಲೆ ಯತ್ನ ಮೊದಲಾದ ಅಪರಾಧ ಪ್ರಕರಣಗಳಿದ್ದು, ರೌಡಿ ಶೀಟರ್ ಪಟ್ಟಿಯಲ್ಲಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಆರೋಪಿ ಶ್ರೀನಿವಾಸ್ ಹಾಗೂ ಹೆಡ್ ಕಾನ್ಸ್ ಟೇಬಲ್ ಚಂದ್ರು ಅವರನ್ನು ದೊಡ್ಡಬಳ್ಳಾಪುರ ಹೊರವಲಯದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ರವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಗೊಂಡ ಸಿಬ್ಬಂದಿಯ ಆರೋಗ್ಯ ವಿಚಾರಿಸಿದರು.

ಹಿಂದಿನ ಲೇಖನ‘ಸ್ವಪ್ನ ಮಂಟಪ’ ಸಿನಿಮಾದಲ್ಲಿ ವಿಜಯ ರಾಘವೇಂದ್ರ-ರಂಜನಿ ನಟನೆ
ಮುಂದಿನ ಲೇಖನಇಟಾಲಿಯನ್‌ ಓಪನ್‌ ಪಂದ್ಯಾವಳಿ: ಬೋಪಣ್ಣ ಜೋಡಿಗೆ ಸೋಲು