ಮನೆ ಯೋಗ ಯೋಗಾಭ್ಯಾಸ ಆರಂಭಿಸುವವರಿಗಾಗಿ ಇಲ್ಲಿದೆ ಸುಲಭ ಆಸನಗಳು

ಯೋಗಾಭ್ಯಾಸ ಆರಂಭಿಸುವವರಿಗಾಗಿ ಇಲ್ಲಿದೆ ಸುಲಭ ಆಸನಗಳು

0

ಯೋಗಾಸನದ ಅಭ್ಯಾಸವನ್ನು ಆರಂಭಿಸುವಾಗ ಸುಲಭ ಹಾಗೂ ಸರಳ ಯೋಗಾಸನಗಳನ್ನು ಮಾಡುವುದು ಉತ್ತಮ. ಆರಂಭದಲ್ಲಿ ಯಾವೆಲ್ಲಾ ಯೋಗಾಸನಗಳನ್ನು ಮಾಡಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಪ್ರಾಣಾಯಾಮ

ಉಸಿರಾಟದ ಏರಿಳಿತವನ್ನು ನಿಗ್ರಹಿಸಲು ಪ್ರಾಣಾಯಾಮ ಹೆಚ್ಚು ಸೂಕ್ತವಾಗಿದೆ. ಪ್ರಾಣಾಯಮದಿಂದ ಶ್ವಾಸಕೋಶದ ಆರೋಗ್ಯ ಉತ್ತಮವಾಗುತ್ತದೆ. ಪ್ರಾಣಾಯಾಮದಲ್ಲಿ ಅನುಲೋಮ, ವಿಲೋಮ ಪ್ರಾಣಾಯಾಮ, ಉಜ್ಜಯನಿ, ಬ್ರಾಹ್ಮರಿ, ಬಸ್ರ್ತಿಕಾ, ಸೂರ್ಯ ಬೇಧನ, ಶೀತಲಿ ಎನ್ನುವ ವಿಧಗಳಿವೆ. ಯೋಗದ ಆರಂಭದಲ್ಲಿ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವುದರಿಂದ ಆಸನಗಳನ್ನು ಮಾಡುವಾಗ ಉಸಿರಾಟದ ಏರಿಳಿತವನ್ನು ನಿಯಂತ್ರಸಬಹುದಾಗಿದೆ. ಹೀಗಾಗಿ ಪ್ರಾಣಾಯಾಮವನ್ನು ಸರಿಯಾದ ಶಿಕ್ಷಕರ ಬಳಿ ತರಬೇತಿ ಪಡೆದುಕೊಂಡು ಅಭ್ಯಾಸ ಮಾಡಿ.

​ತ್ರಿಕೋನಾಸನ

ತ್ರಿಕೋನಾಸನವು ನಿಮ್ಮ ಕೋರ್ ಸ್ನಾಯುಗಳನ್ನು ಸಕ್ರಿಯಗೊಳಿಸುತ್ತದೆ. ಬೆನ್ನುಮೂಳೆಯನ್ನು ಹಿಗ್ಗಿಸುತ್ತದೆ. ಈ ಭಂಗಿಯು ಬೆನ್ನುಮೂಳೆಯ ಮತ್ತು ಹಿಂಭಾಗದಲ್ಲಿ ಬಿಗಿತವನ್ನು ಕಡಿಮೆ ಮಾಡುತ್ತದೆ. ಸೊಂಟ ಮತ್ತು ಭುಜಗಳಿಗೆ ಆರಾಮದಾಯಕ ಸ್ಥಿತಿಯನ್ನು ನೀಡುತ್ತದೆ.

ಮಾಡುವ ವಿಧಾನ: ಮೊದಲು ನೇರವಾಗಿ ನಿಂತುಕೊಳ್ಳಿ. ನಂತರ ನಿಧಾನವಾಗಿ ಕಾಲುಗಳನ್ನು ಅಗಲಿಸಿ, ಎಡಭಾಗದಲ್ಲಿ ಬಗ್ಗಿ ಎಡಗಾಲಿನ ಪಕ್ಕದಲ್ಲಿ ನಿಮ್ಮ ಹಸ್ತವನ್ನು ಇಟ್ಟುಕೊಳ್ಳಿ, ಬಲಗೈ ನೇರವಾಗಿ ಮೇಲಕ್ಕೆ ಎತ್ತಿರಲಿ, ಬಲಗೈನ ತುದಿಯ ಮೇಲೆ ನಿಮ್ಮ ದೃಷ್ಟಿಯಿರಲಿ, ಇದೇ ರೀತಿ ಭಲಭಾಗದಲ್ಲಿಯೂ ಮಾಡಿ ಇದರಿಂದಾಗಿ ಇಡೀ ದೇಹಕ್ಕೆ ರಕ್ತ ಸಂಚಾರ ಸುಗಮವಾಗುತ್ತದೆ. ಜೊತೆಗೆ ಭುಜದ ನೋವು, ತಲೆನೋವಿನಂತಹ ಅನಾರೋಗ್ಯವೂ ಕಡಿಮೆಯಾಗುತ್ತದೆ.

ತಾಡಾಸನ

ನಿಂತು ಮಾಡುವ ಸುಲಭ ಆಸನಗಳಲ್ಲಿ ತಾಡಾಸನ ಕೂಡ ಒಂದು, ಪರ್ವತದ ಭಂಗಿಯಲ್ಲಿ ಈ ಆಸನವನ್ನು ಮಾಡಬಹುದಾಗಿದೆ. ದೇಹ ಮತ್ತು ಮನಸ್ಸನ್ನು ಕೇಂದ್ರೀಕರಿಸಿ ಆಂತರಿಕವಾಗಿ ಮನಸ್ಸನ್ನು ಸಮಾಧಾನದಲ್ಲಿ ಇರಿಸಲು ತಾಡಾಸನ ಸಹಾಯಕವಾಗಿದೆ.

ಮಾಡುವ ವಿಧಾನ: ಯೋಗ ಚಾಪೆಯ ಮೇಲೆ ನಿಂತುಕೊಳ್ಳಿ. ನಿಮ್ಮ ಪಾದಗಳು ಅಗಲವಾಗಿರಿಸಿಕೊಳ್ಳಿ, ನಿಮ್ಮ ಕೈಗಳು ನಿಮ್ಮ ದೇಹದ ಪಕ್ಕದಲ್ಲಿರಬೇಕು, ಆಳವಾಗಿ ಉಸಿರಾಡಿ ಮತ್ತು ನಿಧಾನವಾಗಿ ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿ ನಂತರ ನಿಮ್ಮ ಬೆರಳುಗಳನ್ನು ಇಂಟರ್ಲಾಕ್ ಮಾಡಿ, ಹಿಮ್ಮಡಿಯನ್ನು ಕೊಂಚ ಮೇಲಕ್ಕೆತ್ತಿ ಬೆರಳುಗಳ ಮೇಲೆ ನಿಂತುಕೊಳ್ಳಿ. ಮೂರರಿಂದ ನಾಲ್ಕು ಬಾರಿ ಉಸಿರಾಟ ನಡೆಸಿ ನಂತರ ಸಹಜ ಸ್ಥಿತಿಗೆ ಬನ್ನಿರಿ.

ಗರುಡಾಸನ

ಯೋಗಾಸನ ಕಲಿಯುವವರಿಗೆ ಗರುಡಾಸನ ಉತ್ತಮವಾದ ಆಸನವಾಗಿದೆ. ಇಡೀ ದೇಹವನ್ನು ಬ್ಯಾಲೆನ್ಸ್‌ ಮಾಡುವುದೇ ಈ ಆಸನದ ಸವಾಲಿನ ಕೆಲಸವಾಗಿದೆ. ಹೀಗಾಗಿ ನಿಂತು ಮಾಡುವ ಆಸನಗಳಲ್ಲಿ ಆರಂಭದಲ್ಲಿ ಗರುಡಾಸನವನ್ನು ಆಯ್ಕೆ ಮಾಡಿಕೊಳ್ಳಿ. ಇದು ನಿಮ್ಮ ದೇಹವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು, ಅದೇ ರೀತಿ ಮಾನಸಿಕ ಆರೋಗ್ಯವನ್ನು ಕೂಡ ಉತ್ತಮವಾಗಿಟ್ಟುಕೊಳ್ಳಲು ಸಹಾಯಕವಾಗಿದೆ.

ಮಾಡುವ ವಿಧಾನ: ನೇರವಾಗಿ ಎದ್ದು ನಿಂತು ನಿಮ್ಮ ದೃಷ್ಟಿಯನ್ನು ನೇರವಾಗಿ ಕೇಂದ್ರೀಕರಿಸಿ. ಬಲಗಾಲನ್ನು ಬಗ್ಗಿಸಿ, ಎಡ ತೊಡೆಯ ಮೇಲೆ ನಿಮ್ಮ ಬಲ ತೊಡೆಯನ್ನು ಸರಿಸಿ ಮತ್ತು ಅದನ್ನು ನಿಧಾನವಾಗಿ ಎಡ ಕಾಲಿನ ಸುತ್ತಲೂ ಸುತ್ತಿಕೊಳ್ಳಿ. ಬಲ ಪಾದದ ಮೇಲ್ಭಾಗವು ಎಡ ಕಾಲಿನ ಮೇಲೆ ವಿಶ್ರಾಂತಿ ಪಡೆಯಬೇಕು. ಮೊಣಕೈಗಳನ್ನು ಬಗ್ಗಿಸಿ ಮತ್ತು ಅವುಗಳನ್ನು ನಿಮ್ಮ ಎದೆಯ ಮುಂಭಾಗಕ್ಕೆ ಸರಿಸಿ. ಒಂಟಿ ಕಾಲಿನಲ್ಲಿ ನಿಂತು ದೇಹವನ್ನು ಬ್ಯಾಲೆನ್ಸ್ ಮಾಡಿ.

​ಸೂರ್ಯ ನಮಸ್ಕಾರ

ಯೋಗಾಸನವನ್ನು 8 ವರ್ಷದ ನಂತರ ಯಾವ ವಯಸ್ಸಿನಲ್ಲಿಬೇಕಾದರೂ ಆರಂಭಿಸಬಹುದು. ಆರಂಭದಲ್ಲಿ ಸೂರ್ಯ ನಮಸ್ಕಾರವನ್ನು ಅಭ್ಯಾಸ ಮಾಡುವುದು ಒಳ್ಳೆಯದಾಗಿದೆ. ಬೆಳಿಗ್ಗೆ ಅಥವಾ ಸಂಜೆ 4 ರಿಂದ 5 ಸೂರ್ಯ ನಮಸ್ಕಾರ ಮಾಡುವುದು ನಿಮ್ಮ ಯೋಗಾಭ್ಯಾಸದ ಆರಂಭಕ್ಕೆ ಉತ್ತಮ ಪ್ರಾರಂಭವಾಗುತ್ತದೆ. ಸೂರ್ಯ ನಮಸ್ಕಾರದಲ್ಲಿನ 12 ಹಂತಗಳು ಸಹ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ನೆರವಾಗುತ್ತವೆ. ಅವು ಯಾವವೆಂದರೆ ಪ್ರಣಾಮಾಸನ, ಹಸ್ತ ಉತ್ಥಾನಾಸನ, ಹಸ್ತಪಾದಾಸನ, ಅಶ್ವ ಸಂಚಾಲಾಸನ, ದಂಡಾಸನ, ಅಷ್ಟಾಂಗ ನಮಸ್ಕಾರ, ಭುಜಂಗಾಸನ, ಪರ್ವತಾಸನ ಮಾಡಿ ಮತ್ತೆ ಪುನಃ ಅದೇ ಆಸನಗಳ ಮೂಲಕ ಸಹಜ ಸ್ಥಿತಿಗೆ ಬರಬಹುದು. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ರಕ್ತ ಚಲನೆ, ತೂಕನಷ್ಟಕ್ಕೂ ಸೂರ್ಯ ನಮಸ್ಕಾರ ಸಹಾಯ ಮಾಡುತ್ತದೆ.

ಹಿಂದಿನ ಲೇಖನರಾಜ್ಯದಲ್ಲಿ 1,552 ಮಂದಿಗೆ ಕೋವಿಡ್ ಪಾಸಿಟಿವ್
ಮುಂದಿನ ಲೇಖನಜು.25ಕ್ಕೆ 2ನೇ ಹಂತದ ವಿಚಾರಣೆಗೆ ಹಾಜರಾಗಲು ಸೋನಿಯಾ ಗಾಂಧಿಗೆ ಸಮನ್ಸ್‌