ನವದೆಹಲಿ: ಅಕ್ರಮ ಸಾಗಣೆ ಮಾಡುತ್ತಿದ್ದ ₹2.5 ಕೋಟಿ ಮೌಲ್ಯದ 402 ಗ್ರಾಂ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಮಹಿಳಾ ಡ್ರಗ್ ಪೆಡ್ಲರ್ ಸೇರಿದಂತೆ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಳಿವಿನ ಮೇರೆಗೆ ಡಿಸೆಂಬರ್ 7 ಮತ್ತು 8ರಂದು ಶೋಧ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ನರೇಲಾ ಮೂಲದ 41 ವರ್ಷದ ಮಹಿಳೆಯನ್ನು ಬಂಧಿಸಲಾಗಿದ್ದು, 102 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಯಿತು ಎಂದು ಉಪ ಪೊಲೀಸ್ ಆಯುಕ್ತ ನಿಧಿನ್ ವಲ್ಸನ್ ಹೇಳಿದ್ದಾರೆ.
ಮಹಿಳೆಯು ಈ ಹಿಂದೆ 2023ರಲ್ಲಿ ತನ್ನ ಪತಿಯೊಂದಿಗೆ ಇದೇ ರೀತಿಯ ಅಪರಾಧಕ್ಕಾಗಿ ಬಂಧಿಸಲ್ಪಟ್ಟಿದ್ದಳು. ಜಾಮೀನಿನ ಮೇಲೆ ಹೊರಗಿದ್ದಳು ಎಂದು ಅವರು ಹೇಳಿದರು.
ಮತ್ತೊಬ್ಬ ಆರೋಪಿ ಉತ್ತರ ಪ್ರದೇಶ ಮೂಲದ ಜಿಲಾನಿ (30) ಎಂಬಾತನನ್ನು ಬವಾನಾದಲ್ಲಿ ಬಂಧಿಸಲಾಗಿದ್ದು, ಆತನಿಂದ 300 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯ ಮೇಲೆ ಉತ್ತರ ಪ್ರದೇಶದಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇಬ್ಬರನ್ನು ಬಂಧಿಸಲಾಗಿದ್ದು, ಇತರ ಡ್ರಗ್ ಪೆಡ್ಲರ್ಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ವಲ್ಸನ್ ತಿಳಿಸಿದ್ದಾರೆ.