ಬೆಂಗಳೂರು: ಹಕ್ಕುಸ್ವಾಮ್ಯ ಪಡೆಯದೇ ಕೆಜಿಎಫ್ 2 ಚಿತ್ರದ ಹಾಡು ಬಳಕೆ ಪ್ರಕರಣ ಸಂಬಂಧ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್ಸಿ) ಮತ್ತು ಭಾರತ್ ಜೋಡೋದ ಅಧಿಕೃತ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡುವಂತೆ ಟ್ವಿಟರ್ ಸಂಸ್ಥೆಗೆ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ.
ಎಂಆರ್’ಟಿ ಮ್ಯೂಸಿಕ್ ಕೆಜಿಎಫ್ 2 ಹಿಂದಿ ಚಿತ್ರಗೀತೆಗಳ ಹಕ್ಕುಸ್ವಾಮ್ಯ ಹೊಂದಿದೆ. ಆದರೆ, ಎಂಆರ್’ಟಿ ಮ್ಯೂಸಿಕ್‌ನಿಂದ ಹಕ್ಕುಸ್ವಾಮ್ಯ ಪಡೆಯದೇ ಭಾರತ್ ಜೋಡೊ ಯಾತ್ರೆಯಲ್ಲಿ ಕೆಜಿಎಫ್ 2 ಚಿತ್ರದ ಹಿಂದಿ ಗೀತೆ ಬಳಕೆ ಸಂಬಂಧ ಎಂಆರ್’ಟಿ ಮ್ಯೂಸಿಕ್ ಕಂಪನಿ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್’ಐಆರ್ ದಾಖಲಿಸಿತ್ತು.
ಅಲ್ಲದೇ, ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್ಸಿ) ಮತ್ತು ಭಾರತ್ ಜೋಡೋದ ಅಧಿಕೃತ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ವಾಣಿಜ್ಯ ನ್ಯಾಯಾಲಯ ಮಧ್ಯಂತರ ಆದೇಶ ನೀಡಿತ್ತು.
ಈ ಕುರಿತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜಿ.ನರೇಂದರ್ ಅವರಿದ್ದ ವಿಭಾಗೀಯ ಪೀಠ, ವಾಣಿಜ್ಯ ನ್ಯಾಯಾಲಯ ನೀಡಿದ ಆದೇಶಕ್ಕೆ ತಡೆ ನೀಡಿ ಆದೇಶಿಸಿದೆ. ಅರ್ಜಿದಾರರು, ಆಕ್ಷೇಪಾರ್ಹವಾದ ಅಂಶಗಳನ್ನು ತೆಗೆದು ಹಾಕುವುದಕ್ಕೆ ಒಪ್ಪಿರುವುದರಿಂದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಮಾಡುತ್ತಿರುವುದಾಗಿ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.