ಮನೆ ಕಾನೂನು ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಕುದುರೆ ರೇಸ್‌ ಆಯೋಜಿಸಲು ಅನುಮತಿಸಿ ಹೈಕೋರ್ಟ್‌ ಮಧ್ಯಂತರ ಆದೇಶ

ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಕುದುರೆ ರೇಸ್‌ ಆಯೋಜಿಸಲು ಅನುಮತಿಸಿ ಹೈಕೋರ್ಟ್‌ ಮಧ್ಯಂತರ ಆದೇಶ

0

ಕುದುರೆ ರೇಸ್ ಆಯೋಜನೆಗೆ ಅನುಮತಿ ಕೋರಿ ಬೆಂಗಳೂರು ಟರ್ಫ್‌ ಕ್ಲಬ್‌ (ಬಿಟಿಸಿ) ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದ ರಾಜ್ಯ ಸರ್ಕಾರದ ನಿಲುವಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಅತೃಪ್ತಿ ವ್ಯಕ್ತಪಡಿಸಿದ್ದು, ಕುದುರೆ ಪಂದ್ಯಗಳ ಆಯೋಜನೆಗೆ ಅನುಮತಿಸಿದೆ. ಈ ವೇಳೆ ನ್ಯಾಯಾಲಯವು ರಾಜ್ಯ ಸರ್ಕಾರವನ್ನು ಉದ್ದೇಶಿಸಿ, “ಯಾರದೋ ತಪ್ಪಿಗೆ ಇನ್ಯಾರಿಗೋ ಬರೆ ಎಳೆದಂತಿದೆ ಸರ್ಕಾರದ ನಿಲುವು” ಎಂದು ಅಸಮಾಧಾನ ಸೂಚಿಸಿತು.

Join Our Whatsapp Group

ಪಂದ್ಯಗಳ ಆಯೋಜನೆಗಾಗಿ ಕ್ಲಬ್‌ ಕೋರಿದ್ದ ಮನವಿಯನ್ನು ತಿರಸ್ಕರಿಸಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್ ಕಂಪೆನಿ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ಮಧ್ಯಂತರ ಆದೇಶ ಮಾಡಿದೆ. ಇದರಿಂದಾಗಿ ಕಳೆದ ಮೂರು ತಿಂಗಳಿನಿಂದ ಸ್ಥಗಿತಗೊಂಡಿದ್ದ ಪಂದ್ಯಾವಳಿಗಳು ಪುನಾರಂಭಗೊಳ್ಳಲಿವೆ.

“ಬಿಟಿಸಿಯು, ಆನ್‌ ಕೋರ್ಸ್ (ಬೆಂಗಳೂರು) ಮತ್ತು ಆಫ್ ಕೋರ್ಸ್‌ (ಮೈಸೂರು, ಮುಂಬೈ) ಮೂಲಕ ಪಂದ್ಯಗಳನ್ನು ಹಮ್ಮಿಕೊಳ್ಳಬಹುದಾಗಿದೆ. ಎಲ್ಲಾ ಪಂದ್ಯಗಳೂ, ಸರ್ಕಾರ ಈಗಾಗಲೇ 2024ರ ಮಾರ್ಚ್‌ನಲ್ಲಿ ನೀಡಿರುವ ಪರವಾನಗಿಗೆ ಅನುಗುಣವಾದ ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟಿರುತ್ತವೆ. ಅಂತೆಯೇ, ಪ್ರತಿವಾದಿಗಳು ರೇಸಿಂಗ್ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಸ್ವಾತಂತ್ಯ ಹೊಂದಿದ್ದಾರೆ” ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು “ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಕುದುರೆ ಪಂದ್ಯಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅವಲಂಬಿಸಿದ್ದಾರೆ. ಪ್ರತಿ ದಿನ ಒಂದು ಕೋಟಿ ರೂಪಾಯಿಗಿಂತಲೂ ಹೆಚ್ಚಿನ ತೆರಿಗೆ ಸಂಗ್ರಹವಾಗಿ, ಬೊಕ್ಕಸಕ್ಕೆ ಸೇರುತ್ತದೆ. ರೇಸ್‌ ಕೋರ್ಸ್ ಆಡಳಿತ ಮಂಡಳಿಯಲ್ಲಿ ಸರ್ಕಾರದ ಹಣಕಾಸು ಕಾರ್ಯದರ್ಶಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರೂ ಸದಸ್ಯರಾಗಿದ್ದಾರೆ. ಕುದುರೆ ಪಂದ್ಯಗಳ ಆಯೋಜನೆಯ ಎಲ್ಲ ಚಟುವಟಿಕೆಗಳು ಸರ್ಕಾರದ ಮೂಗಿನಡಿಯಲ್ಲೇ ಇರುತ್ತವೆ. ಇಲ್ಲಿ ಅಕ್ರಮಗಳು ನಡೆಸುವ ಸಾಧ್ಯತೆಗಳೇ ಇಲ್ಲ” ಎಂದರು.

“ತೆರಿಗೆ ವಂಚನೆ ಮತ್ತು ಅಕ್ರಮ ಬೆಟ್ಟಿಂಗ್ ನಡೆಸಿದವರ ವಿರುದ್ಧ, ದೋಷಾರೋಪ ಹೊತ್ತ ಬುಕ್ಕಿಗಳ ಪರವಾನಗಿ ರದ್ದುಪಡಿಸಲು ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ. ಅಷ್ಟಕ್ಕೂ, ಕುದುರೆ ಪಂದ್ಯಗಳ ಆಯೋಜನೆಯಲ್ಲಿ ಬುಕ್ಕಿ ಕಂಪೆನಿಗಳಿಗೆ ಯಾವುದೇ ಸಂಬಂಧ ಇರುವುದಿಲ್ಲ. ಆದ್ದರಿಂದ, ಪಂದ್ಯಗಳ ಆಯೋಜನೆಗೆ ಅವಕಾಶ ಕಲ್ಪಿಸಬೇಕು” ಎಂದು ಕೋರಿದ್ದರು.

ದಿ ಕರ್ನಾಟಕ ಟ್ರೈನರ್ಸ್‌ ಅಸೋಸಿಯೇಷನ್ಸ್ ಪರ ವಕೀಲರಾದ ರವಿ ಬಿ.ನಾಯಕ್‌ ಮತ್ತು ಕೆ ಬಿ ಮೋನೇಶ್‌ ಕುಮಾರ್, ಕರ್ನಾಟಕ ರೇಸ್ ಕುದುರೆ ಮಾಲೀಕರ ಸಂಘದ ಅಧ್ಯಕ್ಷ ಎಸ್‌.ಪದ್ಮನಾಭನ್‌ ಮತ್ತು ಗಿರೀಶ್‌ ಬಾಳಿಗಾ ಪರ ಹಿರಿಯ ವಕೀಲ ಡಿ ಆರ್ ರವಿಶಂಕರ್‌ ಹಾಗೂ ಕರ್ನಾಟಕ ಜಾಕಿಗಳ ಸಂಘದ ಕೆ ಆರ್ ವಸಂತ ಕುಮಾರ್ ಸೇರಿದಂತೆ ಒಟ್ಟು ಎಂಟು ಜನರ ಪರ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಮತ್ತು ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ ಶೆಟ್ಟಿ ವಾದಿಸಿದ್ದರು.

ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಲಾಗಿದೆ.