ಮನೆ ಕಾನೂನು ಅಕ್ರಮ ಫ್ಲೆಕ್ಸ್‌, ಹೋರ್ಡಿಂಗ್‌ ತೆರವಿಗೆ ಹೈಕೋರ್ಟ್‌ ಸೂಚನೆ; ನೂತನ ಜಾಹೀರಾತು ಬೈಲಾ ಕುರಿತು ಬಿಬಿಎಂಪಿ ವಿವರಣೆ

ಅಕ್ರಮ ಫ್ಲೆಕ್ಸ್‌, ಹೋರ್ಡಿಂಗ್‌ ತೆರವಿಗೆ ಹೈಕೋರ್ಟ್‌ ಸೂಚನೆ; ನೂತನ ಜಾಹೀರಾತು ಬೈಲಾ ಕುರಿತು ಬಿಬಿಎಂಪಿ ವಿವರಣೆ

0

ಬೆಂಗಳೂರಿನ ಪಾದಚಾರಿ ಮಾರ್ಗ ಮತ್ತು ರಸ್ತೆಗಳಲ್ಲಿ ಅಳವಡಿಸುವ ಅಕ್ರಮ ಹೋರ್ಡಿಂಗ್‌ಗಳು ಮತ್ತು ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಮೂಲಕ ಮುಂಗಾರಿನ ಈ ಸಂದರ್ಭದಲ್ಲಿ ಪಾದಚಾರಿ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಬಿಬಿಎಂಪಿ ಮತ್ತು ಪೊಲೀಸರಿಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ.

Join Our Whatsapp Group

ಬೆಂಗಳೂರಿನ ಮಾಯಿಗೇಗೌಡ ಎಂಬುವರು ಸಲ್ಲಿಸಿದ್ದ ಹಾಗೂ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಮಳೆಗಾಲದಲ್ಲಿ ಪಾದಚಾರಿಗಳಿಗೆ ಮತ್ತು ವಾಹನ ಸಂಚಾರ ಸುರಕ್ಷತೆಯನ್ನು ಖಾತರಿಪಡಿಸಲು ಅಕ್ರಮವಾಗಿ ಅಳವಡಿಸುವ ಹೋರ್ಡಿಂಗ್‌ ಮತ್ತು ಫ್ಲೆಕ್ಸ್‌ಗಳನ್ನು ತಡೆಯುವ ಹಾಗೂ ನಿಗಾ ಇರಿಸುವ ಕರ್ತವ್ಯದ ವಿಚಾರವಾಗಿ ಅಧಿಕಾರಿಗಳು ತಮ್ಮಷ್ಟಕ್ಕೆ ತಾವೇ ಸಮಾಧಾನಪಟ್ಟುಕೊಳ್ಳುವ ಅಗತ್ಯವಿಲ್ಲ. ಹೋರ್ಡಿಂಗ್‌/ಫ್ಲೆಕ್ಸ್‌ಗಳ ಅಕ್ರಮ ಅಳವಡಿಕೆ ಮಾಡುವುದನ್ನು ನಿಯಂತ್ರಿಸುವುದರ ಜೊತೆಗೆ ವಿಶೇಷವಾಗಿ ಮಳೆಗಾಲದಲ್ಲಿ ಅವು ಜನರ ಜೀವಕ್ಕೆ ಅಪಾಯವನ್ನುಂಟು ಮಾಡದಂತೆ ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

“ಬಿಬಿಎಂಪಿ ಈ ಕುರಿತು ರೂಪಿಸುವ ಬೈಲಾದ ನಿಯಮಾವಳಿಗಳಲ್ಲಿ ಫ್ಲೆಕ್ಸ್‌ ಮತ್ತು ಹೋರ್ಡಿಂಗ್‌ ಹಾಕುವವರಿಗೆ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ನಿರೀಕ್ಷಿಸಲಾಗಿದ್ದು, ತಪ್ಪೆಸಗುವವರಿಗೆ ದಂಡ ವಿಧಿಸಬೇಕು. ಅನಧಿಕೃತ ಫ್ಲೆಕ್ಸ್‌ಗಳನ್ನು ಹಾಕುವ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇಡಲು ಮತ್ತು ಅನಧಿಕೃತವಾಗಿ ಫ್ಲೆಕ್ಸ್‌ಗಳನ್ನು ಹಾಕುವುದರಿಂದ ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತ ತಡೆಗಟ್ಟುವಿಕೆಯನ್ನು ಖಚಿತಪಡಿಸಿಕೊಳ್ಳಲು ಪಾಲಿಕೆ ಅಧಿಕಾರಿಗಳನ್ನು ಕರ್ತವ್ಯಕ್ಕೆ ಒಳಪಡಿಸಲು ನಿಬಂಧನೆಗಳನ್ನು ಬೈಲಾದಲ್ಲಿ ಅಳವಡಿಸಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

“ಪಾದಚಾರಿ ಮಾರ್ಗ ಅಥವಾ ಜನರ ಓಡಾಟ ಹೆಚ್ಚಿರುವ ಜಾಗಗಳಲ್ಲಿ ಫ್ಲೆಕ್ಸ್‌ ಅಳವಡಿಕೆಗೆ ಅನುಮತಿಸಬಾರದು” ಎಂದೂ ನ್ಯಾಯಾಲಯ ಹೇಳಿದೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಅವರು “ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಜಾಹೀರಾತು) ಬೈಲಾ 2024 ಅನ್ನು ರೂಪಿಸಲಾಗಿದೆ. ಇದರಲ್ಲಿ ಪಾದಚಾರಿ ಮಾರ್ಗ ಮತ್ತು ರಸ್ತೆಗಳಲ್ಲಿ ಅಕ್ರಮವಾಗಿ ಫ್ಲೆಕ್ಸ್‌ ಮತ್ತು ಹೋರ್ಡಿಂಗ್‌ ಹಾಕುವುದನ್ನು ನಿಯಂತ್ರಿಸಲು ಮತ್ತು ಪ್ರತಿಬಂಧಿಸಲು ಸೂಕ್ತ ವ್ಯವಸ್ಥೆ ಇದೆ” ಎಂದರು.

“ಬೈಲಾಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆ ಆಹ್ವಾನಿಸಲಾಗಿದೆ. ಇದನ್ನು ಸ್ವೀಕರಿಸಿದ ಬಳಿಕ ಅಧಿಸೂಚನೆ ಹೊರಡಿಸಲಾಗುವುದು” ಎಂದರು.

ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ಜಿ ಆರ್‌ ಮೋಹನ್‌ ಅವರು “ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಹೆಜ್ಜೆ ಇರಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅಕ್ರಮವಾಗಿ ಫ್ಲೆಕ್ಸ್‌ ಮತ್ತು ಹೋರ್ಡಿಂಗ್‌ಗಳನ್ನು ಅಳವಡಿಸುವುದು ಕಡಿಮೆಯಾಗಿದೆ” ಎಂದರು.

ರಾಜ್ಯದ ಬೇರೆ ಬೇರೆ ಕಡೆಯೂ ಫ್ಲೆಕ್ಸ್‌ ಮತ್ತು ಹೋರ್ಡಿಂಗ್‌ ಹಾವಳಿ ಹೆಚ್ಚಾಗಿರುವುದರಿಂದ ಪಿಐಎಲ್‌ ವ್ಯಾಪ್ತಿ ಹೆಚ್ಚಿಸಬೇಕು ಎಂದು ಅರ್ಜಿದಾರರು ಕೋರಿದರು. ಈ ಸಂಬಂಧ ಮುಂದಿನ ವಿಚಾರಣೆಗಳಲ್ಲಿ ಸೂಕ್ತ ಆದೇಶ ಮಾಡಲಾಗುವುದು ಎಂದು ನ್ಯಾಯಾಲಯವು ವಿಚಾರಣೆಯನ್ನು ಸೆಪ್ಟೆಂಬರ್‌ 26ಕ್ಕೆ ಮುಂದೂಡಿತು.