ಮನೆ ಕಾನೂನು ವಿದ್ಯಾರ್ಥಿಯ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ; ಪರೀಕ್ಷೆ ಬರೆಯಲು ಅನುಮತಿ

ವಿದ್ಯಾರ್ಥಿಯ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ; ಪರೀಕ್ಷೆ ಬರೆಯಲು ಅನುಮತಿ

0

ಬಿಎಸ್’ಸಿ ವಿದ್ಯಾರ್ಥಿಯೊಬ್ಬರಿಗೆ ನಿರ್ದಿಷ್ಟ ಪ್ರದೇಶ ಪ್ರವೇಶಿಸದಂತೆ ಉಪವಿಭಾಗಾಧಿಕಾರಿ ಮಾಡಿದ್ದ ಆದೇಶವನ್ನು ಎರಡು ವಾರ ಜಾರಿ ಮಾಡದಂತೆ ಈಚೆಗೆ ಆದೇಶಿಸಿರುವ ಕರ್ನಾಟಕ ಹೈಕೋರ್ಟ್’ನ ಧಾರವಾಡ ಪೀಠವು ಅವರಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಿಂದ ಸೇಡಂ ತಾಲ್ಲೂಕಿಗೆ ಗಡಿಪಾರು ಮಾಡಿದ್ದ ಉಪ ವಿಭಾಗಾಧಿಕಾರಿ ಆದೇಶ ಪ್ರಶ್ನಿಸಿ ಬೀಳಗಿ ತಾಲ್ಲೂಕಿನ 20 ವರ್ಷದ ಸಿದ್ದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ವಿಭಾಗೀಯ ಪೀಠವು ತಡೆಯಾಜ್ಞೆ ಮಾಡಿದೆ.

“ಅರ್ಜಿದಾರರು ವಿದ್ಯಾರ್ಥಿಯಾಗಿದ್ದು, ಫೆಬ್ರವರಿ 22ರಿಂದ ಏಪ್ರಿಲ್ 8ರ ವರೆಗೆ ಪರೀಕ್ಷೆ ಇದೆ. ಹೀಗಾಗಿ, ಅರ್ಜಿದಾರರು ರಕ್ಷಣೆಗೆ ಅರ್ಹವಾಗಿರುವುದರಿಂದ ಉಪವಿಭಾಗಾಧಿಕಾರಿ ಅವರ ಆಕ್ಷೇಪಾರ್ಹ ಆದೇಶಕ್ಕೆ ಎರಡು ವಾರಗಳ ಕಾಲ ತಡೆ ನೀಡಿದ್ದು, ಅವರು ಪರೀಕ್ಷೆ ಬರೆಯಬಹುದಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಅಲ್ಲದೇ, “ಪೊಲೀಸ್ ಕಾಯಿದೆಯ ಸೆಕ್ಷನ್ 55 ಅನ್ವಯಿಸುವ ಯಾವುದೇ ತೆರನಾದ ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ ಎಂದು ಉಪವಿಭಾಗಾಧಿಕಾರಿಗೆ ಮುಚ್ಚಳಿಕೆ ಬರೆದುಕೊಡಬೇಕು” ಎಂದು ಅರ್ಜಿದಾರರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಅಪರಾಧ ಪ್ರಕರಣದಲ್ಲಿ ಸಿದ್ದು ಭಾಗಿಯಾಗಬಹುದು ಎಂಬ ತರ್ಕಬದ್ಧ ಆಧಾರದ ಮೇಲೆ ಉಪವಿಭಾಗಾಧಿಕಾರಿ ಅವರು ಸಿದ್ದು ಅವರನ್ನು ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ 55ರ ಅಡಿ ಬೇರೊಂದು ತಾಲ್ಲೂಕಿಗೆ ಗಡಿಪಾರು ಮಾಡಿದ್ದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು “ಸಿದ್ದು ಬಿಎಸ್’ಸಿ ಓದುತ್ತಿದ್ದು, ಫೆಬ್ರವರಿ 22ರಿಂದ ಪರೀಕ್ಷೆ ಆರಂಭವಾಗಿದೆ. ಏಪ್ರಿಲ್ 8ಕ್ಕೆ ಮುಕ್ತಾಯಗೊಳ್ಳಲಿದೆ. ಉಪವಿಭಾಗಾಧಿಕಾರಿಯ ಆದೇಶವು ಸ್ವೇಚ್ಛೆಯಿಂದ ಕೂಡಿದ್ದು, ಜಮಖಂಡಿಯಿಂದ ಬೇರೆಡೆಗೆ ಸ್ಥಳಾಂತರಿಸುವುದಕ್ಕೆ ಪೂರಕವಾಗಿ ಯಾವುದೇ ದಾಖಲೆ ಇಲ್ಲ” ಎಂದು ವಾದಿಸಿದ್ದರು.

ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “ಹಾಲಿ ರಿಟ್ ಅರ್ಜಿಯು ಮಾನ್ಯತೆಗೆ ಅರ್ಹವಾಗಿಲ್ಲ. ಸಿದ್ದು ಮೇಲ್ಮನವಿಯ ಮೂಲಕ ಪರಿಹಾರ ಪಡೆಯಬಹುದು” ಎಂದು ವಾದಿಸಿದ್ದರು.

ಹಿಂದಿನ ಲೇಖನಬಿಜೆಪಿ ಮುಖಂಡನ ಮನೆ ಚುನಾವಣಾಧಿಕಾರಿಗಳ ದಾಳಿ: 504 ಕುಕ್ಕರ್ ಜಪ್ತಿ
ಮುಂದಿನ ಲೇಖನಈ  ಬಾರಿ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ: ಯತೀಂದ್ರ ಸಿದ್ಧರಾಮಯ್ಯ