ಮನೆ ಕಾನೂನು ವರ್ಗಾವಣೆ ಬೆದರಿಕೆ: ಹೈಕೋರ್ಟ್‌ನಿಂದ ನ್ಯಾ. ಸಂದೇಶ್‌ರಿಗೆ ಭದ್ರತೆ, ತನಿಖೆಗೆ ಎಸ್‌ಐಟಿ ರಚನೆ ಕೋರಿದ್ದ ಪಿಐಎಲ್‌ ವಜಾ

ವರ್ಗಾವಣೆ ಬೆದರಿಕೆ: ಹೈಕೋರ್ಟ್‌ನಿಂದ ನ್ಯಾ. ಸಂದೇಶ್‌ರಿಗೆ ಭದ್ರತೆ, ತನಿಖೆಗೆ ಎಸ್‌ಐಟಿ ರಚನೆ ಕೋರಿದ್ದ ಪಿಐಎಲ್‌ ವಜಾ

0

ಕರ್ನಾಟಕ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರಿಗೆ ವರ್ಗಾವಣೆ ಬೆದರಿಕೆಯೊಡ್ಡಿದ ಆರೋಪದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಹಾಗೂ ನ್ಯಾಯಮೂರ್ತಿಗಳಿಗೆ ಸೂಕ್ತ ಭದ್ರತೆ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿತು.

ತುಮಕೂರಿನ ವಕೀಲ ಎಲ್ ರಮೇಶ್ ನಾಯಕ್ ಸಲ್ಲಿಸಿದ್ದ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ವಿಚಾರಣೆ ನಡೆಸಿತು.

ವಕೀಲ ರಮೇಶ್‌ ವಾದ ಆಲಿಸಿದ ಪೀಠವು “ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಸೂಕ್ತ ಭದ್ರತೆ ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ, ಈ ಪ್ರಕರಣದಲ್ಲಿ ನ್ಯಾಯಮೂರ್ತಿಗಳಿಗೆ ವೈ, ವೈ+, ಜಡ್, ಜಡ್+ ನಂತಹ ಭದ್ರತೆ ಒದಗಿಸಬೇಕೆಂಬ ಮನವಿಯಲ್ಲಿ ಯಾವುದೇ ಹುರುಳಿಲ್ಲ. ಅದರಲ್ಲೂ, ನ್ಯಾಯಮೂರ್ತಿಗಳಿಗೆ ಸದ್ಯ ಒದಗಿಸಲಾಗಿರುವ ಭದ್ರತೆ ಅಸಮರ್ಪಕವಾಗಿದೆ ಎಂದು ತೋರಿಸುವ ಯಾವುದೇ ಅಂಶಗಳ ಅನುಪಸ್ಥಿತಿಯಲ್ಲಿ ಅರ್ಜಿದಾರರ ಮನವಿ ಪರಿಗಣಿಸಲು ಸಾಧ್ಯವಿಲ್ಲ” ಎಂದು ಆದೇಶದಲ್ಲಿ ಹೇಳಿದೆ.

ನ್ಯಾ. ಸಂದೇಶ್‌ ಅವರಿಗೆ ಬೆದರಿಕೆ ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ರಚಿಸಬೇಕು ಎಂಬುದು ಅರ್ಜಿದಾರರ ಮತ್ತೊಂದು ಮನವಿಯಾಗಿತ್ತು. ಆದರೆ, ಜಾಮೀನು ಅರ್ಜಿಯಲ್ಲಿ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಅದರ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಸೀಮಂತ್ ಕುಮಾರ್ ಸಿಂಗ್ ಸಲ್ಲಿಸಿರುವ ವಿಶೇಷ ಮೇಲ್ಮನವಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್,ಜಾಮೀನು ಅರ್ಜಿಯ ವಿಚಾರಣಾ ವ್ಯಾಪ್ತಿಗೆ ಒಳಪಟ್ಟು ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಹೇಳಿದೆ. ಪ್ರಕರಣವಿನ್ನೂ ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಿರುವಾಗ, ಎಸ್‌ಐಟಿ ರಚನೆ ಮಾಡಬೇಕೆಂಬ ಮನವಿ ಪರಿಗಣಿಸಿದರೆ ವಿಚಾರಣಾ ಹಂತದಲ್ಲಿರುವ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದಂತಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಲಂಚ ಪ್ರಕರಣದಲ್ಲಿ ಜಾಮೀನು ಕೋರಿ ಉಪ ತಹಸೀಲ್ದಾರ್ ಪಿ ಎಸ್ ಮಹೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾ. ಸಂದೇಶ್ ಅವರು ಪ್ರಕರಣದಲ್ಲಿ ಸಮರ್ಪಕ ತನಿಖೆ ನಡೆಸಲಾಗಿಲ್ಲ ಎಂದು ಕಾರಣಕ್ಕೆ ಎಸಿಬಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದೇ ಕಾರಣಕ್ಕೆ ತಮಗೆ ಪರೋಕ್ಷವಾಗಿ ವರ್ಗಾವಣೆಯ ಬೆದರಿಕೆ ಒಡ್ಡಲಾಗಿದೆ ಎಂಬ ಸ್ಫೋಟಕ ವಿಚಾರವನ್ನು ಮುಕ್ತ ನ್ಯಾಯಾಲಯದಲ್ಲಿ ಬಹಿರಂಗಪಡಿಸಿದ್ದರಲ್ಲದೆ, ಬೆದರಿಕೆಯ ವಿಚಾರವನ್ನು ಜುಲೈ 11ರಂದು ಲಿಖಿತ ರೂಪದಲ್ಲಿ ದಾಖಲಿಸಿದ್ದರು.

ಇಂತಹ ಬೆದರಿಕೆಗಳು ನ್ಯಾಯಮೂರ್ತಿಗಳು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲು ಅಡ್ಡಿಯಾಗುತ್ತವೆ. ಇದರಿಂದ, ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಿಸುವ ಹಾಗೂ ನ್ಯಾಯಾಂಗದ ಮೇಲಿನ ಜನರ ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಆದ್ದರಿಂದ, ನ್ಯಾಯಮೂರ್ತಿಗಳಿಗೆ ವರ್ಗಾವಣೆ ಬೆದರಿಕೆಯೊಡ್ಡಿದ ಆರೋಪದ ತನಿಖೆಗಾಗಿ ಎಸ್‌ಐಟಿ ರಚಿಸಲು ಹಾಗೂ ನ್ಯಾ. ಸಂದೇಶ್ ಅವರಿಗೆ ಸೂಕ್ತ ಭದ್ರತೆ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಲಾಗಿತ್ತು.