ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಕರ್ನಾಟಕ ಮೂಲಗೇಣಿ ಅಥವಾ ಒಳಮೂಲ ಗೇಣಿದಾರರಿಗೆ ಮಾಲೀಕತ್ವ ಪ್ರದಾನ ಮಾಡುವ ಅಧಿನಿಯಮ-2011ರ ಸಿಂಧುತ್ವವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಉಡುಪಿಯ ಅದಮಾರು ಮಠ, ಗಣೇಶ್ ಪೈ ಮತ್ತಿತರರು ಸಲ್ಲಿಸಿದ್ದ 5 ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ. ಪೀಠ ತನ್ನ 109 ಪುಟಗಳ ತೀರ್ಪಿನಲ್ಲಿ ಸಾಮಾಜಿಕ ಅಸಮತೋಲನ ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರದ ಕ್ರಮ ನ್ಯಾಯೋಚಿತವಾದದ್ದು,ಎಂದು ಅಭಿಪ್ರಾಯಪಟ್ಟಿದೆ.
ಮೂಲಗೇಣಿದಾರರು ತಲೆಮಾರುಗಳಿಂದ ಭೂಮಿಯನ್ನು ಉಳುಮೆ ಮಾಡುತ್ತಾ ಬಂದಿದ್ದು, ಅವರಿಗೆ ಭೂಮಿಯ ಹಕ್ಕು ನೀಡುವುದು ನ್ಯಾಯೋಚಿತ. ಈ ನಿಟ್ಟಿನಲ್ಲಿ ಸರ್ಕಾರ ಜಾರಿ ಮಾಡಿರುವ ಕಾಯ್ದೆ ಸೂಕ್ತವಾಗಿದ್ದು, ಅದನ್ನು ಎತ್ತಿ ಹಿಡಿಯಬೇಕು ಎಂಬ ಗೇಣಿದಾರರ ಪರ ವಕೀಲರ ವಾದವನ್ನು ಹೈಕೋರ್ಟ್ ಪುರಸ್ಕರಿಸಿದೆ.
ಇದೇ ವೇಳೆ ಭೂಮಿಗೆ ಯೋಗ್ಯ ಬೆಲೆ ಪಾವತಿಸಿ ಜಮೀನು ವಶಪಡಿಸಿಕೊಳ್ಳುವುದಕ್ಕೆ ವಿರುದ್ಧ ವಾಗಿ ಕನಿಷ್ಠ ಬೆಲೆ ಪಾವತಿಸುವ ಮೂಲಕ ಭೂಮಿ ವಶಕ್ಕೆ ಪಡೆಯುತ್ತಿರುವುದು ಸಂವಿಧಾನ ಬಾಹಿರ. ಇದರಿಂದ ಭೂ ಮಾಲೀಕರಿಗೆ ಅನ್ಯಾಯವಾಗಲಿದೆ ಎಂಬ ಭೂ ಮಾಲೀಕರ ವಾದವನ್ನು ಪರಿಗಣಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣದ ಹಿನ್ನಲೆ: ಸ್ವಾತಂತ್ರ್ಯ ಪೂರ್ವದಲ್ಲಿ ಭೂ ಕಂದಾಯ ವಸೂಲಿ ಅಧಿಕಾರವನ್ನು ಬ್ರಿಟಿಷರು ಸ್ಥಳೀಯ ಶ್ರೀಮಂತರು, ಮಠ, ಮಸೀದಿ ಮತ್ತು ಚರ್ಚುಗಳಿಗೆ ನೀಡಿದ್ದರು. ಅದರಂತೆ ಭೂ ಕಂದಾಯ ವಸೂಲಿ ಮಾಡಿ, ಮೇಲುಸ್ತುವಾರಿ ನೋಡಿಕೊಳ್ಳುವವರು ಭೂ ಮಾಲೀಕರು ಎನಿಸಿಕೊಂಡಿದ್ದರು. ಇದೇ ಭೂಮಿಯನ್ನು ತಲೆಮಾರುಗಳಿಂದ ಅನುಭವಿಸಿಕೊಂಡು ಬಂದವರನ್ನು ಮೂಲಗೇಣಿದಾರರು ಎಂದು ದಾಖಲೆಗಳಲ್ಲಿ ನಮೂದಿಸಲಾಗಿತ್ತು.
ಭೂಮಿ ತಮ್ಮ ಸ್ವಾಧೀನದಲ್ಲಿದ್ದರೂ ಮಾಲೀಕತ್ವವಿಲ್ಲದ ಕಾರಣ ಅದನ್ನು ಅಭಿವೃದ್ಧಿ ಮಾಡುವುದಕ್ಕಾಗಲೀ ಬ್ಯಾಂಕ್ ಗಳಿಂದ ಸಾಲ ಪಡೆಯುವುದಕ್ಕಾಗಲೀ, ಮಾರಾಟ ಮಾಡಲಿಕ್ಕಾಗಲೀ ಮೂಲ ಗೇಣಿದಾರರಿಗೆ ಹಕ್ಕು ಇಲ್ಲವಾಗಿತ್ತು.
ಗೇಣಿದಾರರ ಸುದೀರ್ಘ ಹೋರಾಟದ ಬಳಿಕ ಸರ್ಕಾರ ಮೂಲ ಗೇಣಿದಾರರಿಗೆ ಜಮೀನಿನ ಸಂಪೂರ್ಣ ಮಾಲೀಕತ್ವ ನೀಡುವ ಸಂಬಂಧ ಹಾಗೂ ಭೂ ಮಾಲೀಕರಿಗೆ ನ್ಯಾಯಯುತ ಪರಿಹಾರ ನೀಡುವ ಸಂಬಂಧ ರಾಜ್ಯ ಸರ್ಕಾರ ಕಾಯ್ದೆ ಜಾರಿಗೆ ತಂದಿತು. THE KARNATAKA CONFERMENT OF OWNERSHIP ON MULAGENI OR VOLAMULAGENI TENANTS ACT, 2011ನ್ನು 2012ರಲ್ಲಿ ಜಾರಿಗೊಳಿಸಿತ್ತು. ಸರ್ಕಾರದ ಈ ಕ್ರಮ ಪ್ರಶ್ನಿಸಿ ಭೂಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು, ಇದೀಗ ಹೈಕೋರ್ಟ್ ಅರ್ಜಿದಾರರ ಮನವಿಯನ್ನು ವಜಾಗೊಳಿಸಿದೆ.