ಮನೆ ರಾಜಕೀಯ ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು ಸ್ವಾಗತಾರ್ಹ: ಸಚಿವ ಡಾ.ಕೆ.ಸುಧಾಕರ್

ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು ಸ್ವಾಗತಾರ್ಹ: ಸಚಿವ ಡಾ.ಕೆ.ಸುಧಾಕರ್

0

ಬೆಂಗಳೂರು: ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯದ ಬಗ್ಗೆ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ತೀರ್ಪು ಸ್ವಾಗತಾರ್ಹವಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಹೈಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಮಕ್ಕಳು ಶಾಲೆಗಳಲ್ಲಿ ಶಿಕ್ಷಣದ ಕಡೆ ಗಮನ ನೀಡಬೇಕು. ಶಿಕ್ಷಣದಿಂದ ಆರೋಗ್ಯಯುತ ಸಮಾಜದ ನಿರ್ಮಾಣ ಸಾಧ್ಯ. ದೇಶದ ಅಭಿವೃದ್ಧಿಯಲ್ಲೂ ಶಿಕ್ಷಣದ ಪಾತ್ರ ಬಹಳ ದೊಡ್ಡದಿದೆ ಎಂದು ಹೇಳಿದರು.

ಶಾಲೆಗಳು ದೇಗುಲಗಳಿಗೆ ಸಮಾನ. ಇಲ್ಲಿ ಜಾತಿ, ಮತ ಮತ್ತು ಧರ್ಮದ ಭೇದವಿಲ್ಲ. ಸಮವಸ್ತ್ರ ಅನ್ನುವುದು ಏಕತೆ ಮತ್ತು ಸಮಾನತೆಯನ್ನು ಬಿಂಬಿಸಲು ಇರುವ ಸಣ್ಣ ಮಾರ್ಗ. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ ಧರಿಸುವುದರ ಜೊತೆಗೆ ಕಲಿಕೆ ಬಗ್ಗೆ ಗಮನಕೊಡಬೇಕು.  ವೈಜ್ಞಾನಿಕ ದೃಷ್ಟಿಕೋನ ಇಟ್ಟುಕೊಂಡು ಮಕ್ಕಳು ಶಾಲೆಯಲ್ಲಿ ಅನ್ಯೋನ್ಯ ಭಾವನೆಯಿಂದ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.

ಶಾಲೆಗಳಲ್ಲಿ ಶಿಕ್ಷಣ ಹೊರತುಪಡಿಸಿ ಬೇರೆ ವಿಷಯಗಳಿಗೆ ಆದ್ಯತೆ ನೀಡಬಾರದು. ಧಾರ್ಮಿಕ ವಿಚಾರದಲ್ಲಿ ಯಾರೋ ಕೆಲವರು ಉದ್ದೇಶಪೂರ್ವಕವಾಗಿ ಮಕ್ಕಳು ಹಾಗೂ ಪೋಷಕರ ಹಾದಿ ತಪ್ಪಿಸಿದ್ದರು. ಸಮಾಜದ ಶಾಂತಿ‌ ಕದಡಲು ಇಂತಹ ಕೃತ್ಯಗಳಿಗೆ ಇಳಿಯುವುದು ಸರಿಯಲ್ಲ ಎಂದರು.

ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ಬೇರೆ ಬೇರೆ ಕಾರಣಗಳಿಂದ ಅಂತರಾಷ್ಟ್ರೀಯ ಸುದ್ದಿಯಾಯಿತು. ಕೆಲ ರಾಜಕೀಯ ಪಕ್ಷಗಳು ಹಿಜಾಬ್ ಗಲಾಟೆಗೆ ಕುಮ್ಮಕ್ಕು ನೀಡಿದವು. ರಾಜಕೀಯ ಪಕ್ಷಗಳ ಆಟಕ್ಕೆ ವಿದ್ಯಾರ್ಥಿಗಳು ಬಲಿಯಾಗಬಾರದು. ಸಮಾನ ಶಿಕ್ಷಣ ಮತ್ತು ಸಮಾಜದ ಅಭಿವೃದ್ಧಿ ಕಡೆ ಎಲ್ಲರೂ ಗಮನ ಕೊಡಬೇಕು. ಹೈಕೋರ್ಟ್ ತೀರ್ಪನ್ನು ಎಲ್ಲರೂ ಗೌರವಿಸಿ ಅದನ್ನು ಪಾಲಿಸಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಬೇಕು. ಪೋಷಕರು ಕೂಡ ಮಕ್ಕಳ‌ ವಿಚಾರ ಬಂದಾಗ ಯಾವುದೇ ವಿವಾದಕ್ಕೆ ಬೆಲೆ‌ ಕೊಡದೆ ಮಕ್ಕಳ ಭವಿಷ್ಯವನ್ನು ಕಾಪಾಡಲು ಒತ್ತು ನೀಡಬೇಕು ಎಂದು ಸಚಿವರು ಮನವಿ ಮಾಡಿದರು.