ಮನೆ ಅಪರಾಧ ವೃದ್ಧ ದಂಪತಿ ಕೊಲೆಗೆ ಯತ್ನಿಸಿ ಸುಲಿಗೆ: ಆರೋಪಿ ಬಂಧನ

ವೃದ್ಧ ದಂಪತಿ ಕೊಲೆಗೆ ಯತ್ನಿಸಿ ಸುಲಿಗೆ: ಆರೋಪಿ ಬಂಧನ

0

ಬೆಂಗಳೂರು: ವೃದ್ಧ ದಂಪತಿ ಕೊಲೆಗೆ ಯತ್ನಿಸಿ ಸುಲಿಗೆ ಮಾಡಲಾಗಿದ್ದು, ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಸ್ಥಳೀಯರೇ ಹಿಡಿದು ಥಳಿಸಿರುವ ಘಟನೆ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಾರ್ಚ್ 12ರಂದು ಮಧ್ಯಾಹ್ನ ನಡೆದಿರುವ ಘಟನೆಯಿಂದಾಗಿ ರಾಮಾನುಜಾಚಾರ್ (65) ಹಾಗೂ ಅವರ ಪತ್ನಿ ಲಕ್ಷ್ಮಿ (63) ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಷಣ್ಮುಗಂ (56) ಎಂಬಾತನನ್ನು ಬಂಧಿಸಲಾಗಿದೆ. ಆತನ ಬಳಿಯ ಚಿನ್ನಾಭರಣವನ್ನೂ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬನಶಂಕರಿ 3ನೇ ಹಂತದ ಕಾವೇರಿ ನಗರದ ಎರಡನೇ ಮುಖ್ಯರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ರಾಮಾನುಜಾಚಾರ್ ಹಾಗೂ ಲಕ್ಷ್ಮಿ ದಂಪತಿ ನೆಲೆಸಿದ್ದರು. ಪರಿಚಯಸ್ಥನೇ ಆಗಿದ್ದ ಉತ್ತರಹಳ್ಳಿಯ ನ್ಯೂ ಸಪ್ತಗಿರಿ ಬಡಾವಣೆ ನಿವಾಸಿ ಷಣ್ಮುಗಂ, ಆಗಾಗ ಮನೆಗೆ ಬಂದು ಹೋಗುತ್ತಿದ್ದ. ವೃದ್ಧರ ಬಳಿ ಚಿನ್ನಾಭರಣವಿರುವುದನ್ನು ನೋಡಿ ಸುಲಿಗೆ ಮಾಡಲು ಸಂಚು ರೂಪಿಸಿದ್ದ.’‘ಮಾರ್ಚ್ 12ರಂದು ಮಧ್ಯಾಹ್ನ ರಾಮಾನುಜಾಚಾರ್ ತರಕಾರಿ ತರಲು ಅಂಗಡಿಗೆ ಹೋಗಿದ್ದರು. ಲಕ್ಷ್ಮಿ ಮಾತ್ರ ಮನೆಯಲ್ಲಿದ್ದರು. ಅದೇ ವೇಳೆ ಫ್ಲ್ಯಾಟ್‌ಗೆ ನುಗ್ಗಿದ್ದ ಆರೋಪಿ, ಲಕ್ಷ್ಮಿಯವರ ಹೊಟ್ಟೆ, ಕೈ ಹಾಗೂ ಕುತ್ತಿಗೆಗೆ ಡ್ರ್ಯಾಗರ್‌ನಿಂದ ಇರಿದಿದ್ದ. 21 ಗ್ರಾಂ ತೂಕದ ಎರಡು ಚಿನ್ನದ ಬಳೆ ಹಾಗೂ 49 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡಿದ್ದ’ ಎಂದೂ ಮೂಲಗಳು ತಿಳಿಸಿವೆ.

‘ಅಂಗಡಿಗೆ ಹೋಗಿದ್ದ ರಾಮಾನುಜಾಚಾರ್ ಮನೆಗೆ ವಾಪಸು ಬಂದಿದ್ದರು. ಅವರ ಮೇಲೂ ದಾಳಿ ಮಾಡಿದ್ದ ಆರೋಪಿ, ಬೆನ್ನು ಹಾಗೂ ಕೈಗೆ ಡ್ರ್ಯಾಗರ್‌ ಇರಿದಿದ್ದ. ಪ್ರತಿರೋಧವೊಡ್ಡಿದ್ದ ರಾಮಾನುಜಾಚಾರ್, ಆರೋಪಿ ಕೈ ಎಳೆದಾಡಿದ್ದರು. ಇದೇ ವೇಳೆ ಕೈಯಲ್ಲಿದ್ದ ಡ್ರ್ಯಾಗರ್ ಆರೋಪಿ ತಲೆಗೆ ತಾಗಿ ರಕ್ತ ಬರಲಾರಂಭಿಸಿತ್ತು.’‘ರಕ್ಷಣೆಗಾಗಿ ದಂಪತಿ ಕೂಗಾಡಲಾರಂಭಿಸಿದ್ದರು. ಆರೋಪಿ ಮನೆಯಿಂದ ಹೊರಬಂದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಸ್ಥಳೀಯರೇ ಆತನನ್ನು ಬೆನ್ನಟ್ಟಿ ಹಿಡಿದು ಥಳಿಸಿದ್ದರು.

ನಂತರ, ಹೊಯ್ಸಳ ಗಸ್ತು ವಾಹನದ ಸಿಬ್ಬಂದಿಗೆ ಆರೋಪಿಯನ್ನು ಒಪ್ಪಿಸಿದ್ದರು. ತಲೆಗೆ ಗಾಯವಾಗಿರುವುದರಿಂದ ಆರೋಪಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ಹಿಂದಿನ ಲೇಖನಹಿಜಾಬ್ ವಿವಾದ ಕುರಿತು ಹೈಕೋರ್ಟ್ ತೀರ್ಪು: ಸುಪ್ರೀಂ ಮೊರೆ ಹೋಗಲು ನಿರ್ಧಾರ
ಮುಂದಿನ ಲೇಖನಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು ಸ್ವಾಗತಾರ್ಹ: ಸಚಿವ ಡಾ.ಕೆ.ಸುಧಾಕರ್