ಮನೆ ಸ್ಥಳೀಯ ಅಧಿಕಾರಿಗಳಿಗೆ ಉನ್ನತ ಮಟ್ಟದ ತರಬೇತಿ: ಶಾಲಿನಿ ರಜನೀಶ್

ಅಧಿಕಾರಿಗಳಿಗೆ ಉನ್ನತ ಮಟ್ಟದ ತರಬೇತಿ: ಶಾಲಿನಿ ರಜನೀಶ್

0

ಮೈಸೂರು: ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಿಂದ ಪ್ರತಿ ವರ್ಷ ಸರಾಸರಿ ೨೮೦ ತರಬೇತಿ ಕಾರ್ಯಕ್ರಮಗಳ ಮೂಲಕ ಸುಮಾರು ೮೪೦೦ ಗ್ರೂಪ್ ಎ ಮತ್ತು ಬಿ ಅಧಿಕಾರಿಗಳಿಗೆ ಉನ್ನತ ಮಟ್ಟದ ತರಬೇತಿ ನೀಡಲಾಗುತ್ತಿದ್ದು, ನಮ್ಮ ರಾಜ್ಯದ ಉತ್ತಮ ಆಡಳಿತದ ಬಗ್ಗೆ ತಿಳಿದುಕೊಳ್ಳಲು ಬರುವ ಇತರೆ ರಾಜ್ಯಗಳ ಅಧಿಕಾರಿಗಳಿಗೆ ನಮ್ಮ ಸಂಸ್ಥೆ ವತಿಯಿಂದ ತರಬೇತಿ ನೀಡುತ್ತಿರುವುದು ನಮ್ಮ ರಾಜ್ಯದ ಹೆಮ್ಮೆಯ ವಿಷಯವಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಮೈಸೂರು ಆಡಳಿತ ತರಬೇತಿ ಸಂಸ್ಧೆಯ ಮಹಾ ನಿರ್ದೇಶಕಿ ಶಾಲಿನಿ ರಜನೀಶ್ ಹೇಳಿದರು.

೨೦೨೪ನೇ ಬ್ಯಾಚ್‌ನ ತ್ರಿಪುರ ರಾಜ್ಯದ ಆಡಳಿತ ಸೇವೆಗೆ ಸೇರಿದ ಎ ವೃಂದದ ಒಟ್ಟು ೩೦ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಮೇ ೯ ರಿಂದ ಮೇ ೧೨ರವರೆಗೆ ಹಮ್ಮಿಕೊಂಡಿದ್ದು ಈ ತರಬೇತಿ ಕಾರ್ಯಕ್ರಮವನ್ನು ಮೈಸೂರು ಆಡಳಿತ ತರಬೇತಿ ಸಂಸ್ಥೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದರು
ನಮ್ಮ ರಾಜ್ಯದ ಇ-ಆಡಳಿತ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಉತ್ತಮ ಆಡಳಿತ ಹಾಗೂ ನಾಗರಿಕ ಸ್ನೇಹಿ ಯೋಜನೆಗಳಾದ ಭೂಮಿ, ಮೋಜಿಣಿ, ಸೇವಾಸಿಂಧು, ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ, ಕೂಸಿನ ಮನೆ ಇತ್ಯಾದಿ ಯಶಸ್ವಿ ಯೋಜನೆಗಳ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದರೊಂದಿಗೆ ಪ್ರಶಿಕ್ಷಣಾರ್ಥಿಗಳು ಮೈಸೂರಿನ ಪಾರಂಪರಿಕ ಸ್ಥಳಗಳು, ಚಾಮರಾಜನಗರ ಜಿಲ್ಲೆಯ ನಿಟ್ರೆ ಗ್ರಾಮ ಪಂಚಾಯತಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಮೈಸೂರು ಮಹಾನಗರ ಪಾಲಿಕೆಗೆ ಭೇಟಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕರಾದ (ಆಡಳಿತ), ರೂಪಶ್ರೀ.ಕೆ, ಜಂಟಿ ನಿರ್ದೇಶಕ (ತರಬೇತಿ) ಸಾಧನ ಅಶೋಕ್ ಪೋಟೆ, ತರಬೇತಿ ನಿರ್ದೇಶಕ ಡಾ.ಕವಿತ ಎಂ.ಆರ್ ಮತ್ತು ಸಂಸ್ಥೆಯ ಎಲ್ಲಾ ಬೋಧಕರು ಉಪಸ್ಥಿತರಿದ್ದರು.