ಮನೆ ಕಾನೂನು ಪತ್ರಕರ್ತನಿಗೆ ೬ ಲಕ್ಷ ದಂಡ ವಿಧಿಸಿದ ಹೈಕೋರ್ಟ್

ಪತ್ರಕರ್ತನಿಗೆ ೬ ಲಕ್ಷ ದಂಡ ವಿಧಿಸಿದ ಹೈಕೋರ್ಟ್

0

ಬೆಂಗಳೂರು: ತಾನು ಪರಿಶಿಷ್ಟ ಜಾತಿಗೆ ಸೇರಿದ್ದೇನೆ ಅಥವಾ ಪತ್ರಕರ್ತನಿದ್ದೇನೆ ಎಂದು ಪುಂಡಾಟಿಕೆ ಮೂಲಕ ಸಾರ್ವಜನಿಕ ಆಸ್ತಿಗಳನ್ನು ಅತಿಕ್ರಮಿಸಿ ದೌರ್ಜನ್ಯ ಮೆರೆಯುತ್ತಾ ಹೋದರೆ ಸಾಮಾನ್ಯ ಜನರು ಇಂತಹ ವರ್ಗದವರ ಜೊತೆ ಹೊಂದಿರುವ ಸೌಹಾರ್ದ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ವತಿಯಿಂದ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಹಂಚಿಕೆ ಮಾಡಬೇಕಿದ್ದ ಮನೆಯಲ್ಲಿ ಅನಧಿಕೃತವಾಗಿ ೨೧ ವರ್ಷ ಕಾಲ ವಾಸ ಮಾಡಿದ್ದಲ್ಲದೆ, ರಾಜ್ಯ ಎಸ್ಸಿ-ಎಸ್‌ಟಿ ಆಯೋಗಕ್ಕೆ ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮುಡಾ  ಅಧಿಕಾರಿಗಳು ಖುದ್ದಾಗಿ ಹಾಜರಾಗಿ ವರ್ಷಗಟ್ಟಲೆ ಅಲೆಯುವಂತೆ ಮಾಡಿದ ಮೈಸೂರಿನ ಪತ್ರಕರ್ತ ಜಿ.ಎಂ.ಮಹದೇವ ಅವರಿಗೆ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ೬ ಲಕ್ಷ ರೂ. ದಂಢ ವಿಧಿಸಿದೆ.

ಈ ದಂಡದ ಮೊತ್ತವನ್ನು ಮುಡಾಕ್ಕೆ ೬ ವಾರಗಳಲ್ಲಿ ಪಾವತಿಸಬೇಕು. ವಿಳಂಬವಾದರೆ ಗಡುವು ಮೀರಿದ ದಿನದಿಂದ ಪ್ರತಿದಿನ ೧ ಸಾವಿರ ಹೆಚ್ಚುವರಿ ದಂಡ ನೀಡುತ್ತಾ ಹೋಗಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತೀರ್ಪು ನೀಡಿದೆ.

ಇಂತಹ ಪ್ರಕರಣಗಳಿಂದ ನಮ್ಮ ಸಂವಿಧಾನದ ನಿರ್ಮಾತೃಗಳು ತಮ್ಮ ಗೋರಿಗಳಲ್ಲೇ ನರಳಾಡಬಲ್ಲರು. ನಿಜಕ್ಕೂ ಇದು ಸಮಾಜವನ್ನು ತಲ್ಲಣಗೊಳಿಸುವ ಸಂಗತಿ ಎಂದು ಪೀಠ ಹೇಳಿದೆ.

ಪ್ರಕರಣದ ವಿವರ: ಮೈಸೂರಿನ ರಾಷ್ಟ್ರಕ್ರಾಂತಿ ಹೆಸರಿನ ಪತ್ರಿಕೆ ಸಂಪಾದಕ ಹಾಗೂ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಘದ ಅಧ್ಯಕ್ಷ ಜಿ.ಎಂ.ಮಹದೇವ ಅವರು ಪರಿಶಿಷ್ಟ ಜಾತಿ-ವರ್ಗಕ್ಕೆ ಮುಡಾದಿಂದ ಹಂಚಿಕೆ ಮಾಡಬೇಕಿದ್ದ ಮನೆಯಲ್ಲಿ ೨೦೦೦ ಇಸವಿಯಿಂದ ಜ.೨೫ ರಿಂದ  ವಾಸ ಮಾಡುತ್ತಿದ್ದರು. ಮಹದೇವ ಅವರಿಗೆ ಮನೆ ಹಂಚಿಕೆಯಾಗಿಲ್ಲ. ಹಾಗಾಗಿ ಅದನ್ನು ತೆರವುಗೊಳಿಸಬೇಕು ಎಂದು ಮುಡಾ ಆದೇಶಿಸಿತ್ತು. ಆದರೆ ಈ  ಆದೇಶವನ್ನು ಪ್ರಶ್ನಿಸಿ ಮಹದೇವ ಅವರು ಪ್ರಕರಣವನ್ನು ರಾಜ್ಯ ಮತ್ತು ಕೇಂದ್ರದ ಎಸ್ಸಿ-ಎಸ್ಟಿ ಆಯೋಗದಲ್ಲಿ ಪ್ರಶ್ನೆ ಮಾಡಿದ್ದರು. ಕಡೆಗೆ ರಿಟ್ ಅರ್ಜಿ ಹಾಕಿ ತಮ್ಮ ಪ್ರತಿಕೂಲ ಸ್ವಾಧೀನಾನುಭವವನ್ನು ಕಾಯಂಗೊಳಿಸುವಂತೆ ಹೈಕೋರ್ಟ್ ಕದ ಬಡಿದಿದ್ದರು.

ವಿಚಾರಣೆ ನಡೆಸಿ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಪೀಠ, ಅರ್ಜಿದಾರ ಮಹದೇವ ಅವರು ಪುಂಡಾಟಿಕೆ ಮೆರೆದಿದ್ದಾರೆ. ಇವರಿಗೆ ಮುಡಾ ವಸತಿಯು ಕಾನೂನು ಬದ್ಧವಾಗಿ ಹಂಚಿಕೆ ಆಗದಿದ್ದರೂ ತಾನೊಬ್ಬ ಪತ್ರಕರ್ತ ಹಾಗೂ ಎಸ್ಸಿ ಎಂದು ಸಾಂವಿಧಾನಿಕ ಸಂಸ್ಥೆಗಳು ಹಾಗೂ ಸರ್ಕಾರಿ ಆಡಳಿತ ಯಂತ್ರದ ಅಮೂಲ್ಯ ಸಮಯ, ಶ್ರಮ ಹಾಗೂ ಹಣವನ್ನು ವ್ಯರ್ಥ ಮಾಡಿದ್ದಾರೆ ಎಂದು ಅನುಕರಣೀಯ ದಂಡ ವಿಧಿಸಿ ತೀರ್ಪು ನೀಡಿದೆ.

ಅರ್ಜಿದಾರರು ತಾವೊಬ್ಬ ಎಸ್ಸಿ ಹಾಗೂ ಮನೆಯಲ್ಲಿ ವಾಸ ಮಾಡಲು ಎಂಜಿನಿಯರ್ ಗಳು ಅನುಮತಿ ನೀಡಿದ್ದಾರೆ. ಎಂಬುದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ ಎಂದು ನ್ಯಾಯಪೀಠ ಹೇಳಿದೆ. ಅಂತೆಯೇ ಇದೇ ರೀತಿ ಕಾನೂನು ಬಾಹಿರವಾಗಿ ಕಬ್ಜಾ ಮಾಡಿರುವವರ ವಿರುದ್ಧ ಸರ್ಕಾರ ಕ್ರಿಮಿನಲ್  ಮತ್ತು ಸಿವಿಲ್ ಮೊಕದ್ದಮೆ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ.

ಹಿಂದಿನ ಲೇಖನಪತ್ರಕರ್ತರ ವಿರುದ್ಧ ಮಾನನಷ್ಟ ಪ್ರಕರಣಗಳಿಗೆ ಸುಪ್ರೀಂ ಅಸಮ್ಮತಿ
ಮುಂದಿನ ಲೇಖನಏಲಕ್ಕಿಯಲ್ಲಿದೆ ಮ್ಯಾಜಿಕ್; ಲೈಂಗಿಕ ಸಾಮರ್ಥ್ಯ ಹೆಚ್ಚಾಗಲು ಪುರುಷರು ಹೀಗೆ ಮಾಡಿ